ದೇಶ

ಪ್ರತಿಭಟನೆ ಹಿಂದೆ ಯಾರಿದ್ದಾರೆ, ಮಾಧ್ಯಮಗಳು ತನಿಖೆ ಮಾಡಲಿ: ತೋಮರ್, ಗೋಯಲ್; ಆರೋಪ ತಳ್ಳಿಹಾಕಿದ ರೈತ ಸಂಘಟನೆಗಳು

Sumana Upadhyaya

ನವದೆಹಲಿ: ರಾಷ್ಟ್ರ ರಾಜಧಾನಿಯ ಹಲವು ಗಡಿಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗಳ ಹಿಂದೆ ಯಾವುದಾದರೂ ಶಕ್ತಿ ಅಥವಾ ಯಾರಾದರೂ ಕುತಂತ್ರ ನಡೆಸುತ್ತಿದ್ದಾರೆಯೇ ಎಂದು ಮಾಧ್ಯಮಗಳು ಕಂಡುಹಿಡಿಯಬೇಕು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಹಾಗೂ ಆಹಾರ ಖಾತೆ ಸಚಿವ ಪಿಯೂಷ್ ಗೋಯಲ್ ಒತ್ತಾಯಿಸಿದ್ದಾರೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ಬರೂ ಸಚಿವರು, ನೂತನ ಕೃಷಿ ಮಸೂದೆಯ ಎರಡು ಮಸೂದೆಗಳಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲು ಇರುವ ಸಾಧ್ಯತೆಯನ್ನು ವಿವರಿಸಿ ಕರಡು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಈಗಾಗಲೇ ರೈತರಿಗೆ ಕಳುಹಿಸಿದೆ. ಮುಂದಿನ ಸಂಧಾನ ಸಭೆಗೆ ರೈತ ಪ್ರತಿನಿಧಿಗಳು ದಿನಾಂಕ ನಿಗದಿಪಡಿಸಬೇಕಿದೆ ಎಂದು ಹೇಳಿದರು.

ಈ ಮಧ್ಯೆ, ರೈತ ಒಕ್ಕೂಟ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು ಸಂಪೂರ್ಣವಾಗಿ ನೂತನ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಮುಂದಿನ ದಿನಗಳಲ್ಲಿ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಹೇಳಿರುವ ಪ್ರತಿಭಟನಾಕಾರರು ದೆಹಲಿಯಲ್ಲಿ ಹೆದ್ದಾರಿಗಳನ್ನು ಕೂಡ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಗೆ ಯಾರಾದರೂ ಕುಮ್ಮಕ್ಕು, ಷಡ್ಯಂತ್ರ ನೀಡುತ್ತಿದ್ದಾರೆ ಎಂದು ಅನಿಸುತ್ತಿದೆಯೇ ಎಂದು ಕೇಳಿದಾಗ ಮಾಧ್ಯಮಗಳ ಕಣ್ಣು ಸೂಕ್ಷ್ಮವಾಗಿದೆ, ಅವರೇ ಇದನ್ನು ಗೊತ್ತುಮಾಡಬೇಕು, ಮಾಧ್ಯಮಗಳೇ ಬಹಿರಂಗಪಡಿಸಲಿ ಎಂದರು.

ಮಾಧ್ಯಮಗಳು ಇದನ್ನು ಶೋಧಿಸಿ ನಿಮ್ಮ ಕೌಶಲ್ಯದಿಂದ ತನಿಖೆ ನಡೆಸಿ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದರು.

ರೈತರು ಮಸೂದೆಗೆ ಸಂಬಂಧಪಟ್ಟಂತೆ ಕೆಲವು ವಿಷಯಗಳು ಸಮಸ್ಯೆಗಳನ್ನು ರೈತರು ಹೇಳಿದ್ದಾರೆ. ನಾವು ರೈತರ ಅಭಿಪ್ರಾಯವನ್ನು ಗೌರವಿಸುತ್ತೇವೆ, ಆ ಬಗ್ಗೆ ಚರ್ಚೆಗೆ ಸಹ ಮುಂದಿದ್ದೇವೆ. ಈ ಹಿಂದೆಯೂ ಚರ್ಚೆ ನಡೆಸಿದ್ದೇವೆ. ಈಗಿನ ಪ್ರಸ್ತಾವನೆ ಬಗ್ಗೆ ಯಾವುದೇ ಸಂಶಯ, ಸಮಸ್ಯೆಗಳಿದ್ದರೆ ಅದಕ್ಕೂ ಚರ್ಚೆಗೆ ಸಿದ್ದ. ಈ ಸಂದರ್ಭದಲ್ಲಿ ನಮ್ಮ ಜೊತೆ ಮಾತುಕತೆಗೆ ಬಾರದಂತೆ ಯಾರಾದರೂ ತಡೆಯುತ್ತಿದ್ದಾರೆಯೇ ಅದನ್ನು ನಿಮ್ಮ ಬುದ್ಧಿವಂತಿಕೆಗೆ ಬಿಡುತ್ತೇವೆ ಎಂದು ಹೇಳಿದರು.

ಮಾತುಕತೆಗೆ ಸರ್ಕಾರದ ಬಾಗಿಲು ಯಾವಾಗಲೂ ಸಿದ್ದವಾಗಿದೆ, ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಇಬ್ಬರೂ ಸಚಿವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

SCROLL FOR NEXT