ದೇಶ

ಕೃಷಿ ಸಂಬಂಧಿತ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಉಪವಾಸ ಸತ್ಯಾಗ್ರಹ: ಕೇಂದ್ರಕ್ಕೆ ಅಣ್ಣಾ ಹಜಾರೆ ಎಚ್ಚರಿಕೆ

Lingaraj Badiger

ಪುಣೆ: ಎಂ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ ಸೇರಿದಂತೆ ಕೃಷಿಗೆ ಸಂಬಂಧಿಸಿದ ಇತರೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ "ಉಪವಾಸ ಸತ್ಯಾಗ್ರಹ" ಆರಂಭಿಸುವುದಾಗಿ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಕೇಂದ್ರ ಸರ್ಕಾರಕ್ಕೆ ಸೋಮವಾರ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರ ಬರೆದಿರುವ ಅಣ್ಣಾ ಹಜಾರೆ ಅವರು, ಈ ಹಿಂದೆ ಕೇಂದ್ರ ಸರ್ಕಾರ ತಾನು ನೀಡಿದ ಭರವಸೆಯನ್ನು ಈಡೇರಿಸಿಲ್ಲ. ನನಗೆ ನೀಡಿದ ಭರವಸೆ ಈಡೇರಿಸಲು ವಿಫಲಾಗಿರುವ ಕೇಂದ್ರದ ವಿರುದ್ಧ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸುವ ಚಿಂತನೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗಕ್ಕೆ(ಸಿಎಸಿಪಿ) ಸ್ವಾಯತ್ತತೆ ನೀಡಬೇಕು ಎಂದು ಸಹ ಹಜಾರೆ ಅವರು ಒತ್ತಾಯಿಸಿದ್ದಾರೆ.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ಕಳೆದ ವರ್ಷ ಫೆಬ್ರವರಿಯಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಂದಿನ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರು ಸ್ವಾಮಿನಾಥನ್ ಆಯೋಗದ ವರದಿ ಜಾರಿ ಹಾಗೂ ಇತರೆ ಕೃಷಿ ಸಂಬಂಧಿತ ಬೇಡಿಕೆಗಳ ಪರಿಶೀಲನೆಗಾಗಿ ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಲಿಖಿತ ಭರವಸೆ ನೀಡಿದ್ದರು. ನಂತರ ಫೆಬ್ರವರಿ 5, 2019ರಂದು ಅಣ್ಣಾ ಹಜಾರೆ ಅವರು ಉಪವಾಸ ಕೈಬಿಟ್ಟಿದ್ದರು.

ಅಣ್ಣಾ ಹಜಾರೆ ಅವರು ಈಗ ತೋಮರ್ ಗೆ ಬರೆದಿರುವ ಪತ್ರದ ಜತೆ ಈ ಹಿಂದೆ ರಾಧಾ ಮೋಹನ್ ಸಿಂಗ್ ಅವರು ನೀಡಿದ ಲಿಖಿತ ಭರವಸೆ ಪ್ರತಿಯನ್ನು ಸಹ ಲಗತ್ತಿಸಿದ್ದಾರೆ.

SCROLL FOR NEXT