ದೇಶ

ನ್ಯಾಯಾಂಗ ನಿಂದನೆ ಕೊನೆಯ ಅಸ್ತ್ರವಾಗಬೇಕು: ಉದ್ಧವ್ ಠಾಕ್ರೆ, ಆದಿತ್ಯ ವಿರುದ್ಧ ಮಹಿಳೆಯ ಟ್ವೀಟ್‌ ಗೆ 'ಹೈ' ಅಭಿಪ್ರಾಯ

Lingaraj Badiger

ಮುಂಬೈ: ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗದ ಟೀಕೆಗೂ ಮುಕ್ತ ಅವಕಾಶ ಇದೆ. ಹೀಗಾಗಿ ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಿಸುವುದು ಕೊನೆಯ ಆಶ್ರಯ ಅಥವಾ ಅಸ್ತ್ರವಾಗಬೇಕು ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಹಾಗೂ ಸಚಿವ ಆದಿತ್ಯ ಠಾಕ್ರೆ ವಿರುದ್ಧ ಟ್ವೀಟ್ ಮಾಡಿದ ಮಹಿಳೆ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಪ್ರಕರಣ ರದ್ದು ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅಂತಿಮ ವಾದ- ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎಂ.ಎಸ್. ಕಾರ್ನಿಕ್ ಅವರ ನ್ಯಾಯಪೀಠ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಇರುತ್ತದೆ ಎಂಬುದು ನಮಗೆ ಗೊತ್ತು. ನ್ಯಾಯಾಂಗದಲ್ಲಿಯೂ ನಾವು ಅದಕ್ಕೆ ಮುಕ್ತರಾಗಿದ್ದೇವೆ. ನಿಂದನೆ ಕೇಸ್ ಕೊನೆಯ ಅಸ್ತ್ರವಾಗಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

ಎಫ್‌ಐಆರ್ ನಲ್ಲಿ ಯಾವುದೇ ಅಪರಾಧವನ್ನು ಉಲ್ಲೇಖಿಸಿಲ್ಲ ಮತ್ತು ಮಹಿಳೆಯ ಪೋಸ್ಟ್ ನಲ್ಲಿ ಒಂದೇ ಒಂದು ಆಕ್ಷೇಪಾರ್ಹವಾದ ಪದ ಇಲ್ಲ ಎಂದು ಮಹಿಳೆಯ ಪರ ವಕೀಲ ಅಭಿನವ್ ಚಂದ್ರಚೂಡ್ ವಾದಿಸಿದರು.

ಸಿಎಂ ಹಾಗೂ ಸಚಿವ ಆದಿತ್ಯ ಠಾಕ್ರೆ ವಿರುದ್ಧ ಟ್ವೀಟ್ ಮಾಡಿದ್ದ ಸುನೈನಾ ಹೋಲೆ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಅದನ್ನು ರದ್ದುಗೊಳಿಸುವಂತೆ ಕೋರಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

SCROLL FOR NEXT