ದೇಶ

ಶ್ರೀರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವನು, ನಾವು ರಾಮಭಕ್ತರು: ಅಖಿಲೇಶ್ ಯಾದವ್

Raghavendra Adiga

ಅಯೋಧ್ಯೆ: ಭಗವಾನ್ ಶ್ರೀರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವನು ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ.

ಅಝಮ್ ಘರ್ ನಿಂದ ಲಖನೌಗೆ ಹಿಂದಿರುಗುವ ಮಾರ್ಗದಲ್ಲಿ ಅಯೋಧ್ಯೆಗೆ ಆಗಮಿಸಿದ ಅಖಿಲೇಶ್ ಭಗವಾನ್ ಶ್ರೀರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವ ಎಂದು ಪ್ರತಿಪಾದಿಸಿದ್ದಾರೆ. ಶೀಘ್ರದಲ್ಲೇ ರಾಮನ ಪೂಜೆಗೆ ತನ್ನ ಕುಟುಂಬ ಸದಸ್ಯರೊಂದಿಗೆ ಅಯೋಧ್ಯೆಗೆ ಭೇಟಿ ನೀಡಲಿದ್ದೇನೆ.

"ರಾಮನು ಸಮಾಜವಾದಿ ಪಕ್ಷಕ್ಕೆ ಸೇರಿದವನು, ನಾವು ರಾಮನ ಭಕ್ತರು. ಹಾಗೆಯೇ ಕೃಷ್ಣನ ಭಕ್ತರು" ಎಂದು ಸೋಮವಾರ ಸಂಜೆ ಇಲ್ಲಿ ಸುದ್ದಿಗಾರರೊಂದಿಗಿನ ಸಂವಾದದಲ್ಲಿ ಹೇಳಿದ್ದಾರೆ. ಅಲ್ಲದೆ ಭಗವಾನ್ ರಾಮನಿಗೆ ತಮ್ಮ ಪ್ರಾರ್ಥನೆ ಸಲ್ಲಿಸಲು ತಮ್ಮ ಕುಟುಂಬ ಸದಸ್ಯರೊಂದಿಗೆ ಶೀಘ್ರದಲ್ಲೇ ಅಯೋಧ್ಯೆಗೆ ಬರುವುದಾಗಿ ಯಾದವ್ ಹೇಳಿದ್ದಾರೆ. ಆದಾಗ್ಯೂ, ದೇವರಿಗೆ ಪ್ರಾರ್ಥನೆ ಸಲ್ಲಿಸಲು ಅಯೋಧ್ಯೆಗೆ ಭೇಟಿ ದಿನಾಂಕವನ್ನು ಅವರು ಖಚಿತಪಡಿಸಿಲ್ಲ.

ಸುದ್ದಿಗಾರರ ಜತೆ ಮಾತನಾಡಿದ ಯಾದವ್ ದೇವಾಲಯ ನಗರಿ ಅಯೋಧ್ಯೆಯ ಅಭಿವೃದ್ಧಿಗಾಗಿ ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ ವಿವಿಧ ಕಾರ್ಯಗಳ ಬಗೆಗೆ ವಿವರಿಸಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅವರು ಮಾಡಿದ ವಿವಿಧ ಕೆಲಸಗಳಲ್ಲಿ ಅಯೋಧ್ಯೆಯ ಸುತ್ತಲಿನ ರಿಂಗ್ ರಸ್ತೆಯಾದ "ಪರಿಕ್ರಮ ಮಾರ್ಗ್"ದ ಉದ್ದಕ್ಕೂ "ಪಾರಿಜಾತದ ಮರಗಳ" ತೋಟವನ್ನು ನಿರ್ಮಿಸಿದ್ದನ್ನು ಉಲ್ಲೇಖಿಸಿದ್ದಾರೆ. ಯಾದವ್ ಈ ರಸ್ತೆಯ ಉದ್ದಕ್ಕೂ ಧಾರ್ಮಿಕ ಪ್ರಾಮುಖ್ಯತೆಯೊಂದಿಗೆ ವಿವಿಧ ಜಾತಿಯ ಮರಗಳನ್ನು ನೆಟ್ಟಿದ್ದರು. 

"ನಾನು ಸರಯೂ ನದಿಯ ದಡದಲ್ಲಿ ದೀಪಗಳನ್ನು ಮತ್ತು ಭಗವಾನ್ ರಾಮನ ಆರಾಧನೆಗಾಗಿ 'ಭಜನ್ ಸ್ಥಾಳ್' ನಲ್ಲಿ ಧ್ವನಿ ವ್ಯವಸ್ಥೆಯನ್ನು ಮಾಡಿದ್ದೆ" ಅವರು ಹೇಳಿದರು.

ತಮ್ಮ ಮುಂದಿನ ಚುನಾವಣಾ ಯೋಜನೆಗಳ ಕುರಿತು, ಯಾದವ್ ತಮ್ಮ ಪಕ್ಷವು ಇನ್ನು ಮುಂದೆ ದೊಡ್ಡ ಪಕ್ಷಗಳೊಂದಿಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು, 2022 ರಲ್ಲಿ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು 403 ಸ್ಥಾನಗಳಲ್ಲಿ ಕನಿಷ್ಠ 351 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ರಾಜ್ಯದಲ್ಲಿ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ "ನಾನು ಸಣ್ಣ ಪಕ್ಷಗಳೊಂದಿಗೆ ಮಾತ್ರ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತೇನೆ" ಎಂದು ಹೇಳಿದರು. ಇದೇ ವೇಳೆ ಯಾದವ್ ಅವರು ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರಿಗೆ ಒಂದು ಸ್ಥಾನ ಕಲ್ಪಿಸುವುದಾಗಿ ಹೇಳಿದ್ದಾರೆ.

ಇನ್ನು ಕೇಂದ್ರದ ನೂತನ ಕೃಷಿ ಕಾನೂನುಗಳು ರೈತರ ಪಾಲಿಗೆ ಡೆತ್ ವಾರಂಟ್ ಎಂದು ಹೇಳಿದ ಯಾದವ್ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆಯನ್ನು ಮುಂದುವರಿಸಲು ಮತ್ತು ಅವರ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರವು ಶಾಸನಬದ್ಧ ದೃಢೀಕರಣ ನೀಡಬೇಕು ಎಂದಿದ್ದಾರೆ. ಕೇಂದ್ರವು ಮೂರು ಕಾನೂನುಗಳನ್ನು ಜಾರಿಗೆ ತಂದಿರುವುದು ಕೇವಲ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾತ್ರ ಪ್ರಯೋಜನವನ್ನು ಒದಗಿಸಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

SCROLL FOR NEXT