ದೇಶ

ದೆಹಲಿ: ರೈತರ ಪ್ರತಿಭಟನೆ ವೇಳೆ 22 ರೈತರ ಸಾವು; ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿಕೆ

Srinivasamurthy VN

ನವದೆಹಲಿ: ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 20 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ವೇಳೆ 22 ರೈತರು ಸಾವನ್ನಪ್ಪಿದ್ದಾರೆ ಎಂದು ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿದೆ.

ದೆಹಲಿ ಹಾಗೂ ಹರಿಯಾಣದ ಸಿಂಗು ಹಾಗೂ ಟಿಕ್ರಿ ಗಡಿ ಪ್ರದೇಶಗಳಲ್ಲಿ ರೈತರು ಭಾರಿ ಪ್ರಮಾಣದಲ್ಲಿ ಸೇರಿದ್ದು, ತೀವ್ರ ಚಳಿಯ ನಡುವೆಯೂ ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಟಿಕ್ರಿ ಹಾಗೂ ಸಿಂಘು ಗಡಿಗಳಲ್ಲಿ ಮೈಕೊರೆಯುವ ವಿಪರೀತ ಚಳಿಯನ್ನು ಲೆಕ್ಕಿಸದೇ ರೈತರು ಪ್ರತಿಭಟನೆ ನಡೆಸುತ್ತಿದ್ದು, ಮಂಗಳವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಅತ್ಯಂತ ಕನಿಷ್ಠ ತಾಪಮಾನ 4.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಪ್ರತಿಭಟನೆಯಲ್ಲಿ ಈ ವರೆಗೂ 22 ಮಂದಿ ರೈತರು ಮೃತ ಪಟ್ಟಿದ್ದಾರೆ. ಈ ಪೈಕಿ ಹಲವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆ ತಿಳಿಸಿದೆ.

ರೈತರ ಸಾವಿಗೆ ದೆಹಲಿಯ ತೀವ್ರ ಚಳಿ ಕಾರಣ ಎಂದು ಸಂಘಟನೆ ಅಭಿಪ್ರಾಯಪಟ್ಟಿದ್ದು, ತೀವ್ರ ಚಳಿಗೆ ರೈತರು ನೇರವಾಗಿ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಇದೇ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಹೇಳಿದ್ದಾರೆ.

ಈ ಹಿಂದೆ ರೈತರು ದೆಹಲಿ ಚಲೋ ಪ್ರತಿಭಟನೆ ವೇಳೆ ನಡೆದ ಅಪಘಾತದಲ್ಲಿ ಓರ್ವ ರೈತ ಮತ್ತು ಟ್ರಾಕ್ಟರ್ ಚಾಲಕ ಮೃತಪಟ್ಟಿದ್ದರು, ಬಳಿಕ ದೆಹಲಿ ಸಿಂಘು ಗಡಿಯಲ್ಲಿ ಇಬ್ಬರು ರೈತರು ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಈ ಸುದ್ದಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಸ್ವತಃ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮೃತ ರೈತರಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಕೃಷಿ ಕ್ಷೇತ್ರದ ಸುಧಾರಣಾ ಕಾಯ್ದೆಯನ್ನು ರದ್ದುಗೊಳಿಸುವಂತೆ ಬೇಡಿಕೆಯನ್ನಿರಿಸಿದ್ದಾರೆ. ಇದು ಕಾರ್ಪೋರೇಟ್ ವಲಯಕ್ಕೆ ಪ್ರಯೋಜನವನ್ನು ನೀಡುತ್ತದೆ ಹೊರತು ರೈತರಿಗಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.  
 

SCROLL FOR NEXT