ದೇಶ

ಕೋವಿಡ್ ಲಸಿಕೆ ಎಂಬುದು ಮಂತ್ರ ದಂಡವಲ್ಲ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Lingaraj Badiger

ಮನಿಲಾ: ಕೊರೋನಾ ವೈರಸ್ ಅನ್ನು ಒಮ್ಮೆಗೆ ಗುಣಪಡಿಸಲು ಲಸಿಕೆಗಳು ಮಂತ್ರ ದಂಡವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪಶ್ಚಿಮ ಪೆಸಿಫಿಕ್ ಪ್ರಾದೇಶಿಕ ಕಚೇರಿ ಗುರುವಾರ ತಿಳಿಸಿದೆ.

ಲಸಿಕೆ ಜನರಿಗೆ ಲಭಿಸಿದರೂ ಈ ಹಂತದಲ್ಲಿ ಜನರು ಇನ್ನೂ ಹೆಚ್ಚು ಜಾಗರೂಕರಾಗಿರಬೇಕು ಎಂದು ಡಬ್ಲ್ಯುಎಚ್ ಒ ಎಚ್ಚರಿಕೆ ನೀಡಿದೆ.

"ನಾವು ಯಾರೇ ಆಗಿರಲಿ, ಎಲ್ಲಿ ಜೀವಿಸುತ್ತಿರಲಿ.. ಪ್ರಪಂಚದಲ್ಲಿ ಕೊರೋನಾ ವೈರಸ್ ಇರುವವರೆಗೂ ನಾವೆಲ್ಲರೂ ಅಪಾಯದಲ್ಲಿದ್ದಂತೆ. ಎಲ್ಲರೂ ವ್ಯಕ್ತಿಗತ ಕಾಳಜಿ ವಹಿಸಬೇಕು. ನಮ್ಮ ಸುತ್ತಮುತ್ತಲಿನವರು ಸುರಕ್ಷಿತವಾಗಿರಿಸಬೇಕು. ಕೊರೊನಾ ವೈರಸ್ ಬಗ್ಗೆ ಭಯಪಡದೆ ಜಾಗರೂಕರಾಗಿರಬೇಕು, ವೈದ್ಯಕೀಯ ವೃತ್ತಿಪರರ ಸಲಹೆ, ಸೂಚನೆ ಪಾಲಿಸುವ ಮೂಲಕ ನಾವು 2021ಅನ್ನು ಸಂತೋಷದಿಂದ ಆಹ್ವಾನಿಸಬಹುದು ಎಂದು ಡಬ್ಲ್ಯುಎಚ್‌ಒ ಪ್ರಾದೇಶಿಕ ನಿರ್ದೇಶಕ ತಕೇಶಿ ಕಸಾಯಿ ವರ್ಚುವಲ್ ಸಮಾವೇಶದಲ್ಲಿ ಹೇಳಿದ್ದಾರೆ.

ವರ್ಷಗಳಿಂದ ದಣಿವರಿದೆ ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರ ಬಗ್ಗೆ ಪ್ರತಿಯೊಬ್ಬರೂ ಆಲೋಚಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ. "ಲಸಿಕೆ ಕಂಡುಹಿಡಿಯುವುದು ಒಂದು ಸವಾಲು, ಆದರೆ ಅದನ್ನು ಜಗತ್ತಿಗೆ ಸರಿಹೊಂದುವಂತೆ ತಯಾರಿಸುವುದು ದೊಡ್ಡ ಇನ್ನೂ ಸವಾಲು ಎಂದು ಅವರು ಹೇಳಿದ್ದಾರೆ.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ವೈರಸ್ ಪೀಡಿತ ಪ್ರದೇಶಗಳಿಂದ ದೂರವಿರುವುದು ಮತ್ತಿತರ ವ್ಯಕ್ತಿಗತ ಕಾಳಜಿ ವೈರಸ್‌ನಿಂದ ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ ಎಂದು ಡಬ್ಲ್ಯುಎಚ್‌ಒ ಪ್ರಾದೇಶಿಕ ತುರ್ತು ನಿರ್ದೇಶಕ ಇಕೋಡ್ ಕಸೈ ತಿಳಿಸಿದ್ದಾರೆ.

"ಲಸಿಕೆ ಕೋವಿಡ್ -19 ಸಾಂಕ್ರಾಮಿಕವನ್ನು ಒಮ್ಮೆಗೆ ಮಾಯಮಾಡುವ ಮಂತ್ರ ದಂಡವಲ್ಲ, ಈಗಲೂ ಜಾಗರೂಕರಾಗಿರಬೇಕು. ಸಾರ್ವಜನಿಕ ಆರೋಗ್ಯ ವಿಷಯಗಳಲ್ಲಿ ಈ ಸಮಯದಲ್ಲಿ ಯುವಕರ ಪಾಲ್ಗೊಳ್ಳುವಿಕೆ ತುಂಬಾ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT