ದೇಶ

ರೈತರ ಪ್ರತಿಭಟನೆ 22ನೇ ದಿನಕ್ಕೆ: ಗಡಿಭಾಗಗಳಲ್ಲಿ ಸಾವಿರಾರು ಮಂದಿ ಬೀಡು, ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ

Sumana Upadhyaya

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಸರ್ಕಾರ ಮತ್ತು ರೈತರ ಮಧ್ಯೆ ಬಿಕ್ಕಟ್ಟು ನಿವಾರಣೆಗೆ ಸಮಿತಿಯನ್ನು ರಚಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿಲ್ಲ ಎಂದು ನಿನ್ನೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಎರಡೂ ಕಡೆಯ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ರಚಿಸುವುದಾಗಿ ಹೇಳಿತ್ತು. ಆದರೆ ರೈತ ಮುಖಂಡರು ಇದನ್ನು ತಿರಸ್ಕರಿಸಿದ್ದರು.

ಈ ಮಧ್ಯೆ ರೈತರ ಪ್ರತಿಭಟನೆ 22ನೇ ದಿನಕ್ಕೆ ಕಾಲಿಟ್ಟಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಸಿಂಘು, ಟಿಕ್ರಿ, ಘಜಿಪುರ್ ಗಡಿ ಭಾಗಗಳಲ್ಲಿ ರೈತರು ಬೀಡುಬಿಟ್ಟಿರುವುದರಿಂದ ಪೊಲೀಸರು ದೆಹಲಿಗೆ ಹೋಗುವ ಅನೇಕ ಮಾರ್ಗಗಳನ್ನು ಮುಚ್ಚಿದ್ದಾರೆ. ನಗರ ಪೊಲೀಸರು ಹೇಳುವ ಪ್ರಕಾರ, ಸಿಂಘು, ಔಚಂಡಿ, ಪಿಯು ಮನಿಯಾರಿ, ಸಬೊಲಿ ಮತ್ತು ಮಂಗೇಶ್ ಗಡಿಭಾಗಗಳನ್ನು ಮುಚ್ಚಲಾಗಿದೆ. 

ವಾಹನ ಸಂಚಾರಿಗಳು ಲಂಪುರ್, ಸಫಿಯಾಬಾದ್ ಮತ್ತು ಸಿಂಘು ಶಾಲಾ ಟೋಲ್ ಟ್ಯಾಕ್ಸ್ ಗಡಿಗಳ ಮೂಲಕ ಬದಲಿ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ಸಂಚಾರವನ್ನು ಮುಕರ್ಬ ಮತ್ತು ಜಿಟಿಕೆ ರಸ್ತೆಯಿಂದ ಬದಲಿಸಲಾಗಿದೆ. ಔಟರ್ ರಿಂಗ್ ರಸ್ತೆ, ಜಿಟಿಕೆ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ -44ನ್ನು ಸಂಚಾರಿಗಳು ಬಳಸದಂತೆ ಪೊಲೀಸರು ತಿಳಿಸಿದ್ದಾರೆ.

ಹರ್ಯಾಣಕ್ಕೆ ಹೋಗುವವರು ಜರೊಡಾ, ದೌರಲಾ, ಕಪಶೆರಾ, ಬದುಸರೈ, ರಾಜೊಕ್ರಿ ರಾಷ್ಟ್ರೀಯ ಹೆದ್ದಾರಿ 8, ಬಿಜ್ವಾಸನ್/ಬಜ್ಗೆರಾ, ಪಲಮ್ ವಿಹಾರ್ ಮತ್ತು ದುಂಡಹೆರಾ ಗಡಿಗಳ ಮೂಲಕ ಹೋಗುವಂತೆ ಪೊಲೀಸರು ತಿಳಿಸಿದ್ದಾರೆ. ಗಾಜಿಯಾಬಾದ್‌ನಿಂದ ದೆಹಲಿಗೆ ಬರುವ ಸಂಚಾರಕ್ಕಾಗಿ ಗಾಜಿಪುರ ಗಡಿಯು ಮುಚ್ಚಲ್ಪಟ್ಟಿದೆ. ಆನಂದ್ ವಿಹಾರ್, ಡಿಎನ್ಡಿ, ಚಿಲ್ಲಾ, ಅಪ್ಸರಾ ಮತ್ತು ಭೋಪ್ರಾ ಗಡಿಗಳ ಮೂಲಕ ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT