ದೇಶ

ಮುಷ್ಕರದ ವೇಳೆ ಹಲ್ಲೆ, ಬಸ್ ಜಖಂಗೊಳಿಸಿದವರ ವಿರುದ್ಧ ಎಫ್ಐಆರ್: 4 ಸಾರಿಗೆ ಸಂಸ್ಥೆಗಳಿಂದ ಸ್ಪಷ್ಟನೆ

Lingaraj Badiger

ಬೆಂಗಳೂರು: ಸಾರಿಗೆ ಇಲಾಖೆ ಸಿಬ್ಬಂದಿ ಮುಷ್ಕರದ ಸಮಯದಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳ‌ ಮೇಲೆ ದೈಹಿಕ ಹಲ್ಲೆ ಮಾಡಿ, ಬಸ್ಸುಗಳನ್ನು ಜಖಂಗೊಳಿಸಿದ ಹಾಗೂ ಪ್ರಥಮ ವರ್ತಮಾನ ವರದಿ ಆಧಾರದ ಮೇಲೆ ದಾಖಲಾದ ಕೆಲವೇ ಸಿಬ್ಬಂದಿಗಳ ಮೇಲೆ‌ ಮಾತ್ರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಇನ್ನಾವುದೆ ಸಿಬ್ಬಂದಿ ಮೇಲೆ ಕ್ರಮಕೈಗೊಂಡಿರುವುದಿಲ್ಲ ಎಂದು ಸಾರಿಗೆ ಸಂಸ್ಥೆಗಳ ನಾಲ್ಕು ವಿಭಾಗಗಳ ವ್ಯವಸ್ಥಾಪಕರು ಸ್ಪಷ್ಟನೆ ನೀಡಿದ್ದಾರೆ.

ಮುಷ್ಕರದಲ್ಲಿ ಭಾಗವಹಿಸಿದ ನೌಕರರನ್ನು ಅಮಾನತ್ತು ಮಾಡಿದ ವಿವಿಧ ವಿಭಾಗೀಯ ಕಚೇರಿಗಳು ಎಂಬ ಮಾಹಿತಿ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕೆಎಸ್ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯುವ್ಯ ಸಾರಿಗೆ ವಿಭಾಗಗಳು ವಿನಾಕಾರಣ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲವೆಂದು ತಿಳಿಸಿದೆ.

ಕೋಲಾರ ವಿಭಾಗದಲ್ಲಿ 200 ನೌಕರರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದು ಸತ್ಯಕ್ಕೆ ದೂರವಾದದ್ದು. ಕೆಎಸ್ಆರ್ ಟಿಸಿ ವ್ಯಾಪ್ತಿಯಲ್ಲಿ ಒಟ್ಟು 13 ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮುಷ್ಕರ ಸಮಯದ ನಾಲ್ಕು ದಿನಗಳ ವೇತನ ಪಾವತಿ ಕಡಿತದ ಬಗ್ಗೆಯೂ ಇನ್ನೂ ಯಾವುದೇ ಕ್ರಮ ತೆಗೆದು ಕೊಂಡಿರುವುದಿಲ್ಲ. ಮಂಡಳಿ/ಸರ್ಕಾರದ ಮಟ್ಟದಲ್ಲಿ ಇದರ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೆಎಸ್ ಆರ್ಟಿಸಿ ತಿಳಿಸಿದೆ.

ಬೆಮಸಾಸಂಸ್ಥೆ ವ್ಯಾಪ್ತಿಯಲ್ಲಿ ಮುಷ್ಕರದ ಸಮಯದಲ್ಲಿ ಕಾರ್ಯನಿರತ ಸಿಬ್ಬಂದಿಗಳ ಮೇಲೆ ಹಲ್ಲೆಮಾಡಿರುವ ಒಟ್ಟು 03 ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಮುಷ್ಕರದ ಸಮಯದಲ್ಲಿ ಕರ್ತವ್ಯನಿರತ ಸಿಬ್ಬಂದಿಗಳ ಮೇಲೆ ದೈಹಿಕ ಹಲ್ಲೆ ಮಾಡಿ ಬಸ್ಸುಗಳನ್ನು ಜಖಂಗೊಳಿಸಿದ ಹಾಗೂ ಎಫ್ಐಆರ್ ದಾಖಲಾದ ಕೆಲವೇ ಸಿಬ್ಬಂದಿಗಳ ಮೇಲೆ ಮಾತ್ರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಇನ್ಯಾವುದೇ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಂಡಿರುವುದಿಲ್ಲ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಬೀದರ್ ವಿಭಾಗದ 5 ಸಿಬ್ಬಂದಿಗಳು, ಕೊಪ್ಪಳ ವಿಭಾಗದ 02 ಸಿಬ್ಬಂದಿಗಳು, ಬಳ್ಳಾರಿ ವಿಭಾಗದ ಓರ್ವ ಸಿಬ್ಬಂದಿ ಹಾಗೂ ವಿಜಯಪುರ ವಿಭಾಗದ ಓರ್ವ ಸಿಬ್ಬಂದಿ ಹೀಗೆ ಒಟ್ಟು 9 ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಮುಷ್ಕರದಲ್ಲಿ ನಿರತರಾದ ಯಾವುದೇ ಸಿಬ್ಬಂದಿಯ ಮೇಲೆ ಈವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

SCROLL FOR NEXT