ದೇಶ

'ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿಯೇ ಬೆಸ್ಟ್, ಅವರೇ ಪಕ್ಷವನ್ನು ಮುನ್ನಡೆಸಬೇಕು': ಕಾಂಗ್ರೆಸ್ ನಾಯಕರ ಪ್ರತಿಪಾದನೆ!

Sumana Upadhyaya

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಶನಿವಾರ ಪಕ್ಷದ ನಾಯಕರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ. ಪಕ್ಷದಲ್ಲಿ ಮುಂದಿನ ಅಧ್ಯಕ್ಷರು ಯಾರು, ಅನೇಕ ಚುನಾವಣೆಗಳಲ್ಲಿ ಸೋತು ಹೀನಾಯ ಸ್ಥಿತಿಯಲ್ಲಿರುವ ಪಕ್ಷವನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಯಬಹುದು.

ಕಳೆದ ಆಗಸ್ಟ್ ನಲ್ಲಿ ಕಾಂಗ್ರೆಸ್ ನಲ್ಲಿನ ಕೆಲವು ಹಿರಿಯ ನಾಯಕರು ಪಕ್ಷದಲ್ಲಿ ಪುನರ್ ಸಂಘಟನೆಯಾಗಬೇಕು, ಗಾಂಧಿ ಕುಟುಂಬ ಬಿಟ್ಟು ಬೇರೆ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡಬೇಕು, ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಎಂದೆಲ್ಲ ಕೋರಿ ಪತ್ರ ಬರೆದಿದ್ದು ಅದು ಮಾಧ್ಯಮಗಳಿಗೆ ದೊರಕಿ ದೇಶಾದ್ಯಂತ ಸುದ್ದಿಯಾಗಿತ್ತು. ಇದು ಸಹಜವಾಗಿ ಕಾಂಗ್ರೆಸ್ ಹೈಕಮಾಂಡ್ ಗೆ ಸಿಟ್ಟು ತರಿಸಿತ್ತು.

ಹಾಗಾದರೆ ಇಂದಿನ ಸಭೆಯಲ್ಲಿ ಏನೆಲ್ಲಾ ಮಾತುಕತೆಯಾಗಲಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಸುದ್ದಿಸಂಸ್ಥೆಗಳು ಪ್ರಯತ್ನಿಸಿದಾಗ ಆಂತರಿಕ ಭಿನ್ನಾಭಿಪ್ರಾಯ ಪಕ್ಷದಲ್ಲಿ ಇಲ್ಲ, ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿಯವರೇ ಉತ್ತಮ ಎಂದು ಎಲ್ಲರ ಅಭಿಪ್ರಾಯವಾಗಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ, ಪಕ್ಷ ಒಗ್ಗಟ್ಟಿನಿಂದ ಇದ್ದು, ಎಲ್ಲರೂ ಒಂದೇ ಕುಟುಂಬದ ರೀತಿ ಇದ್ದೇವೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದ ನಂತರ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದು 23 ನಾಯಕರು ಸೇರಿದಂತೆ ಎಲ್ಲಾ ಹಿರಿಯ ನಾಯಕರು ಇಂದಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿಯವರು ಕೂಡ ಇಂದಿನ ಸಭೆಗೆ ಹಾಜರಾಗಲಿದ್ದಾರೆ.

ಪಕ್ಷದೊಳಗೆ ಯಾವುದೇ ಆಂತರಿಕ ಭಿನ್ನಮತವಿಲ್ಲ ಎಂದು ಹೇಳಿದರೂ ಕೂಡ ತಾವು ಎತ್ತಿರುವ ವಿಷಯವು ಬಹಳ ಪ್ರಸ್ತುತವಾಗಿದ್ದು, ಅದೀಗ ಬಹಳ ದೂರ ಸಾಗಿಬಂದಿದೆ ಎಂದು ಹೇಳುತ್ತಿದ್ದಾರೆ.

ಇತ್ತೀಚೆಗೆ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್, ಪಕ್ಷದಲ್ಲಿ ಫೈವ್ ಸ್ಟಾರ್ ಸಂಸ್ಕೃತಿಯಿದ್ದು ಬ್ಲಾಕ್ ಮಟ್ಟದಿಂದ ಹಿಡಿದು ಎಲ್ಲಾ ಸಂಘಟನಾತ್ಮಕ ಮಟ್ಟದವರೆಗೆ ಚುನಾವಣೆಗಳನ್ನು ನಡೆಸಬೇಕು ಎಂದು ಹೇಳಿದ್ದರು.

ಸೋನಿಯಾ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಿದ ನಂತರ ಎಲ್ಲಾ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಬಗೆಹರಿದಿವೆ ಎಂದು ಸುರ್ಜೆವಾಲಾ ಹೇಳಿದ್ದಾರೆ. ಇದು ಯಾವುದೇ ವಿಶೇಷ ಗುಂಪಿನ ನಾಯಕರ ಸಭೆ ಅಲ್ಲ. ಇದು ಯಾವುದೇ ಭಿನ್ನಮತೀಯರ ಅಥವಾ ಬಂಡಾಯಗಾರರ ಭೇಟಿಯಲ್ಲ. ನಾವು ಪ್ರತಿಯೊಬ್ಬ ನಾಯಕ ಮತ್ತು ಪ್ರತಿಯೊಬ್ಬ ಸದಸ್ಯನನ್ನು ಕುಟುಂಬ ಸದಸ್ಯರ ರೀತಿ ನೋಡುತ್ತಿದ್ದೇವೆ.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪಕ್ಷದ ಎಐಸಿಸಿ ಸದಸ್ಯರು ಸೇರಿದಂತೆ ಚುನಾವಣಾ ಕಾಲೇಜು ಈ ಹುದ್ದೆಗೆ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡುತ್ತದೆ. ಪಕ್ಷವನ್ನು ಮುನ್ನಡೆಸಲು ಮತ್ತು ಮೋದಿ ಸರ್ಕಾರವನ್ನು ಸಮರ್ಥವಾಗಿ ಎದುರಿಸಲು ರಾಹುಲ್ ಗಾಂಧಿ ಸರಿಯಾದ ವ್ಯಕ್ತಿ ಎಂಬುದು ನನ್ನ ಮತ್ತು ಶೇಕಡಾ 99.9 ರಷ್ಟು ನಾಯಕರ ನಂಬಿಕೆಯಾಗಿದೆ ಎಂದು ಸುರ್ಜೆವಾಲಾ ತಿಳಿಸಿದ್ದಾರೆ.

ಮೋದಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ನಿರ್ಭಯವಾಗಿ ಪ್ರಶ್ನಿಸಿದ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರವಲ್ಲದೆ ಸಾಮಾನ್ಯ ಭಾರತೀಯರಿಗೂ ತನ್ನನ್ನು ಪ್ರೀತಿಸುವ ನಾಯಕರ ಅಪರೂಪದ ವ್ಯಕ್ತಿತ್ವ ರಾಹುಲ್ ಗಾಂಧಿಯವರದ್ದು. ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸಬೇಕು ಎಂದು ನಾವು ಭಾವಿಸುತ್ತೇವೆ ಎಂದು ಸುರ್ಜೆವಾಲಾ ಹೇಳುತ್ತಾರೆ.

SCROLL FOR NEXT