ದೇಶ

ಟಿಎಂಸಿ ಸೇರಿದ ಪತ್ನಿಗೆ ಡೈವೋರ್ಸ್ ನೋಟಿಸ್ ನೀಡುತ್ತೇನೆ: ಬಿಜೆಪಿ ಸಂಸದ ಸೌಮಿತ್ರ ಖಾನ್

Lingaraj Badiger

ಕೋಲ್ಕತ್ತಾ: ವಿಧಾನಸಭೆ ಚುನಾವಣೆ ಸಮೀಪದಲ್ಲಿರುವಂತೆ ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರ ಪತ್ನಿ ಸುಜಾತಾ ಅವರು ಮಮತಾ ಬ್ಯಾನರ್ಜಿ ನಾಯಕತ್ವ ಒಪ್ಪಿ, ಟಿಎಂಪಿ ಸೇರಿದ್ದಾರೆ. ಪತ್ನಿಯ ಪಕ್ಷಾಂತರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪತಿ ಸೌಮಿತ್ರ ಖಾನ್ ಅವರು, ಡೈವೋರ್ಸ್ ನೋಟಿಸ್ ನೀಡುವುದಾಗಿ ಹೇಳಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಷ್ಣುಪುರ ಲೋಕಸಭಾ ಕ್ಷೇತ್ರದಲ್ಲಿ ತನ್ನ ಗಂಡನ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದರೂ ಬಿಜೆಪಿಯಲ್ಲಿ ತನಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಪತ್ನಿಯ ಆರೋಪವನ್ನು ಸೌಮಿತ್ರ ಖಾನ್ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಆಕೆಯ ನಿರ್ಧಾರದಿಂದ ನನಗೆ ಆಘಾತವಾಗಿದೆ. ಸುಜಾತಾರಿಂದ ವಿಚ್ಛೇದನ ಪಡೆಯಲು ನೋಟಿಸ್ ಕಳುಹಿಸುವುದಾಗಿ ತಿಳಿಸಿದ್ದಾರೆ.

"ಟಿಎಂಸಿ ಸುಜಾತಾ ಅವರೊಂದಿಗಿನ ನನ್ನ 10 ವರ್ಷಗಳ ದಾಂಪತ್ಯವನ್ನು ನಾಶಪಡಿಸಿದೆ. ಇಂದಿನಿಂದ ನಾನು ಅವಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ನಾನು ಕೊನೆಯವರೆಗೂ ಆಡಳಿತ ಪಕ್ಷದ ವಿರುದ್ಧ ಹೋರಾಡುತ್ತೇನೆ ಮತ್ತು ಟಿಎಂಸಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ" ಎಂದು ಖಾನ್ ಹೇಳಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಷ್ಣುಪುರ ಕ್ಷೇತ್ರ ಪ್ರವೇಶಿಸದಂತೆ ಸೌಮಿತ್ರ ಖಾನ್ ಅವರಿಗೆ ಕೋರ್ಟ್ ನಿರ್ಬಂಧ ಹೇರಿತ್ತು. ಸುಜಾತಾ ಅವರು ಪತಿಯ ಪರವಾಗಿ ಪ್ರಚಾರ ನಡೆಸಿದ್ದರು.

SCROLL FOR NEXT