ದೇಶ

ಪ್ರತಿಭಟನಾ ನಿರತ ರೈತರು ಶೀಘ್ರದಲ್ಲೇ ಮತ್ತೆ ಮಾತುಕತೆಗೆ ಬರುವ ವಿಶ್ವಾಸವಿದೆ: ನರೇಂದ್ರ ಸಿಂಗ್ ತೋಮರ್

Srinivasamurthy VN

ನವದೆಹಲಿ: ಪ್ರತಿಭಟನಾ ನಿರತ ರೈತರು ಶೀಘ್ರದಲ್ಲೇ ಮತ್ತೆ ಮಾತುಕತೆ ಬರುವ ವಿಶ್ವಾಸವಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧದ ರೈತರ ಆಂದೋಲನ 27ನೇ ದಿನಕ್ಕೆ ಕಾಲಿಡುತ್ತಿದ್ದು, ಈದೇ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಪ್ರತಿಭಟನಾ ನಿರತ ರೈತಪರ ಸಂಘಗಳು ತಮ್ಮ ಆಂತರಿಕ  ಚರ್ಚೆಗಳನ್ನು ಪೂರ್ಣಗೊಳಿಸಿ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿ ಮತ್ತು ಉತ್ತರ ಪ್ರದೇಶದ ಇನ್ನೆರಡು ರೈತ ಪರ ಸಂಘಟನೆಗಳನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಕಾನೂನು ಗಳು ರೈತರಿಗೆ ಖಂಡಿತಾ ನೆರವಾಗಲಿವೆ. ಪ್ರಸ್ತುತ ಭೇಟಿಗೆ ಬಂದಿದ್ದ ಕೆಲ ರೈತರಪರ ಸಂಘಟನೆಗಳು, ಸರ್ಕಾರ  ಜಾರಿಗೆ ತಂದಿರುವ ಕಾನೂನುಗಳು ಉತ್ತಮವಾಗಿವೆ. ರೈತರ ಹಿತದೃಷ್ಟಿಯಿಂದ ಈ ಕಾನಾನು ಮುಂದುವರೆಯಬೇಕು ಎಂದು ಹೇಳಲು ಬಂದಿದ್ದರು. ಕಾನೂನುಗಳಿಗೆ ಯಾವುದೇ ತಿದ್ದುಪಡಿ ಮಾಡದಂತೆ ಸರ್ಕಾರವನ್ನು ಒತ್ತಾಯಿಸಲು ಅವರು ಬಂದಿದ್ದರು ಎಂದು ತೋಮರ್ ಹೇಳಿದರು.

ಅಂತೆಯೇ ಪ್ರತಿಭಟನೆ ಕುರಿತು ಮಾತನಾಡಿದ ಸಚಿವರು, ಅವರು (ಪ್ರತಿಭಟನಾ ನಿರತ ರೈತ ಸಂಘಗಳು) ಶೀಘ್ರದಲ್ಲೇ ತಮ್ಮ ಆಂತರಿಕ ಚರ್ಚೆಗಳನ್ನು ಪೂರ್ಣಗೊಳಿಸಿ ಮಾತುಕತೆಗೆ ಮುಂದಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಪರಸ್ಪರ ಚರ್ಚೆ ಮೂಲಕ ನಾವು ಯಶಸ್ವಿಯಾಗಿ  ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ ಹೇಳಿದರು.

ಕೃಷಿ ಸಚಿವಾಲಯವು ಭಾನುವಾರ ಪ್ರತಿಭಟನಾ ನಿರತ ರೈತ ಸಂಘಟನೆಗಳಿಗೆ ಬಹಿರಂಗ ಪತ್ರ ಬರೆದು, ಸರ್ಕಾರದ ಪ್ರಸ್ತಾವನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಅಂತಿಮ ಮಾಡಿ ತಿಳಿಸುವಂತೆ ಮತ್ತು ಪ್ರತಿಭಟನೆಯನ್ನು ಕೊನೆಗೊಳಿಸಲು ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕವನ್ನು  ನಿಗದಿಗೊಳಿಸುವಂತೆ ಒತ್ತಾಯಿಸಿತ್ತು. ಈಗಾಗಲೇ ಸರ್ಕಾರ ಮತ್ತು ರೈತರ ನಡುವೆ ನಡೆದ ಕನಿಷ್ಠ ಐದು ಸುತ್ತಿನ ಔಪಚಾರಿಕ ಮಾತುಕತೆಗಳು ವಿಫಲಾವಿದ್ದು, ರೈತ ಸಂಘಟನೆಗಳು ಕಾನೂನು ಹಿಂಪಡೆಯದರ ಹೊರತು ಇನ್ನಾವುದೇ ಸಂಧಾನ ಸೂತ್ರಕ್ಕೆ ಒಪ್ಪುತ್ತಿಲ್ಲ. ಹೀಗಾಗಿ ಮುಂದಿನ  ಸುತ್ತಿನ ಮಾತುಕತೆ ತೀವ್ರ ಕುತೂಹಲ ಕೆರಳಿಸಿದೆ.

SCROLL FOR NEXT