ದೇಶ

ಉತ್ತರ ಪ್ರದೇಶದ ಫೂಲ್ಪುರ್ ನ ರಸಗೊಬ್ಬರ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: ಇಬ್ಬರು ಸಾವು, 13 ಮಂದಿ ಅಸ್ವಸ್ಥ

Sumana Upadhyaya

ಪ್ರಯಾಗ್ ರಾಜ್(ಉತ್ತರ ಪ್ರದೇಶ): ಇಲ್ಲಿನ ರಸಗೊಬ್ಬರ ಕಾರ್ಖಾನೆ ಘಟಕದಲ್ಲಿ ಅನಿಲ ಸೋರಿಕೆಯುಂಟಾಗಿ ಉಸಿರುಗಟ್ಟಿ ಇಬ್ಬರು ಅಧಿಕಾರಿಗಳು ಮೃತಪಟ್ಟು 13 ಮಂದಿ ಅಸ್ವಸ್ಥಕ್ಕೀಡಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಫೂಲ್ಪುರ್ ನಲ್ಲಿರುವ ಭಾರತೀಯ ರೈತ ರಸಗೊಬ್ಬರ ಸಹಕಾರಿ ಲಿಮಿಟೆಡ್(ಐಎಫ್ಎಫ್ ಸಿಒ)ದಲ್ಲಿ ಅನಿಲ ಸೋರಿಕೆಯಾಗಿ ಈ ದುರ್ಘಟನೆ ನಡೆದಿದ್ದು ಒಂದು ಘಟಕದ ಕಾರ್ಯಾಚರಣೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ.

ಮೃತಪಟ್ಟವರನ್ನು 47 ವರ್ಷದ  ವಿ ಪಿ ಸಿಂಗ್ ಮತ್ತು 57 ವರ್ಷದ ಅಬೈ ನಂದನ್ ಎಂದು ಗುರುತಿಸಲಾಗಿದ್ದು, ಅಮೋನಿಯಾ ಅನಿಲ ಸೋರಿಕೆಯಾಗಿ ಅದನ್ನು ಸೇವಿಸಿ ಉಸಿರುಗಟ್ಟಿ 13 ಮಂದಿ ಅಸ್ವಸ್ಥಕ್ಕೀಡಾಗಿದ್ದಾರೆ. ಆರು ಮಂದಿ ಪ್ರಯಾಗ್ ರಾಜ್ ಎಸ್ ಆರ್ ಎನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರನ್ನು ಕಾರ್ಖಾನೆಯ ಪಕ್ಕದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಂತ್ರಿಕ ದೋಷದಿಂದ ಪೈಪ್ ನಲ್ಲಿ ಅನಿಲ ಸೋರಿಕೆಯುಂಟಾಗಿ ದುರ್ಘಟನೆ ಸಂಭವಿಸಿದೆ. ಸದ್ಯ ಅನಿಲ ಸೋರಿಕೆ ನಿಂತಿದೆ ಎಂದು ಪ್ರಯಾಗ್ ರಾಜ್ ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿ ತಿಳಿಸಿದ್ದಾರೆ.

SCROLL FOR NEXT