ದೇಶ

'ಮಾತುಕತೆಗೆ ಸಿದ್ದ, ಆದರೆ ಸರ್ಕಾರ ವಾಸ್ತವಿಕ ಪ್ರಸ್ತಾಪ ಕಳುಹಿಸಬೇಕು': ಪ್ರತಿಭಟನಾ ನಿರತ ರೈತರ ಬೇಡಿಕೆ 

Sumana Upadhyaya

ನವದೆಹಲಿ/ಚಂಡೀಗಢ: ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ವಾರಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಸರ್ಕಾರ ತನ್ನ ಹಠವನ್ನು ಬಿಟ್ಟು ರೈತರ ಬೇಡಿಕೆಗಳನ್ನು ಒಪ್ಪಿ ವಾಸ್ತವಿಕ ರೂಪದಲ್ಲಿ ಪ್ರಸ್ತಾವನೆ ಮುಂದಿಡಬೇಕೆಂದು ಒತ್ತಾಯಿಸುತ್ತಿದ್ದಾರೆ. 

ತಮ್ಮ ಮುಖ್ಯ ಅಜೆಂಡಾದಲ್ಲಿ ರಾಜಿಯಾಗದೆ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧ ಎಂದು ರೈತರು ಹೇಳುತ್ತಿದ್ದಾರೆ. ತಮ್ಮ ಮೇಲಿನ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆಎಂ) ನ್ನು ಭೇಟಿ ಮಾಡಿದ ನಂತರ ರೈತ ಮುಖಂಡರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ,ನಾವು ಮಾತುಕತೆಗೆ ಸಿದ್ದರಿದ್ದೇವೆ, ಆದರೆ ಕೇಂದ್ರ ಸರ್ಕಾರ ನಮ್ಮ ಮುಂದೆ ಮುಕ್ತವಾಗಿ ಮಾತುಕತೆಗೆ ಬರಬೇಕು ಎಂದಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಕಾರ್ಯರಚನೆ, ನಿಯಂತ್ರಣ, ವಿದ್ಯುತ್ ತಿದ್ದುಪಡಿ(ವಿಧೇಯಕ) ಮತ್ತು ವಾಯು ಗುಣಮಟ್ಟದ ವಿಧೇಯಕಕ್ಕೆ ಸಂಬಂಧಿಸಿದಂತೆ ತಮಗೆ ಸರ್ಕಾರದ ನಿರ್ಧಾರದ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ ಎಂದು ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ನಾಳೆ ಪ್ರಧಾನ ಮಂತ್ರಿ ಮೋದಿಯವರು ಆರು ರಾಜ್ಯಗಳ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ಸುಮಾರು 9 ಕೋಟಿ ರೈತರ ಖಾತೆಗಳಿಗೆ 18 ಸಾವಿರ ಕೋಟಿ ರೂಪಾಯಿಗಳನ್ನು ನೇರವಾಗಿ ನಗದು ವರ್ಗಾವಣೆ ಮಾಡುವುದಕ್ಕೆ ನಾಳೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಮಾತುಕತೆಗೆ ಮುಕ್ತವಾಗಿ ಸಿದ್ದ, ಬನ್ನಿ ಮಾತನಾಡೋಣ ಎಂದು ಸರ್ಕಾರ ಈಗಲೂ ರೈತರಿಗೆ ಹೇಳುತ್ತಲೇ ಬಂದಿದೆ.

ಅಸಮರ್ಪಕ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಸರ್ಕಾರದ ಈವರೆಗಿನ ಮಾತುಕತೆಯನ್ನು ತಿರಸ್ಕರಿಸಿದ್ದೇವೆ, ವಾಸ್ತವ ಪ್ರಸ್ತಾವನೆ ಮೂಲಕ ನಮ್ಮ ಜೊತೆ ಲಿಖಿತ ಆಶ್ವಾಸನೆ ಮೂಲಕ ಮಾತುಕತೆಗೆ ಬನ್ನಿ, ಆಗ ಸಂಧಾನ ಮಾತುಕತೆ ಆರಂಭಿಸೋಣ ಎಂದು ಸರ್ಕಾರದ ಪ್ರತಿನಿಧಿಗಳಿಗೆ ಹೇಳಿದ್ದೇವೆ ಎಂದು ಸ್ವರಾಜ್ ಅಭಿಯಾನ ಮುಖ್ಯಸ್ಥ ಯೋಗೇಂದ್ರ ಯಾದವ್ ಹೇಳಿದ್ದಾರೆ. ಅವರು ಎಸ್ ಕೆಎಂ ಸಂಘಟನೆಯ ಸದಸ್ಯರಾಗಿದ್ದಾರೆ. 

ವಿರೋಧ ಪಕ್ಷಗಳ ಜೊತೆ ಮಾತುಕತೆಯಾಡುವ ರೀತಿಯಲ್ಲಿ ರೈತರಲ್ಲಿ ಸರ್ಕಾರ ಮಾತುಕತೆಗೆ ಬರುತ್ತದೆ ಎಂದು ಯೋಗೇಂದ್ರ ಯಾದವ್ ಆರೋಪಿಸಿದರು. 

ಸರ್ಕಾರ ತನ್ನ ಮೊಂಡುತನವನ್ನು ತ್ಯಜಿಸಿ ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಬೇಕು ಮತ್ತು ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು. ಪ್ರತಿಭಟನೆ ನಡೆಸುತ್ತಿರುವ ರೈತರು ತಿದ್ದುಪಡಿಗಳನ್ನು ಸ್ವೀಕರಿಸುವುದಿಲ್ಲ ಎಂದು ನಾವು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿದ್ದೇವೆ ಎಂದು ರಾಷ್ಟ್ರೀಯ ಕಿಸಾನ್ ಮಜ್ ದೂರ್ ಮಹಾಸಂಘ ಅಧ್ಯಕ್ಷ ಶಿವ ಕುಮಾರ್ ಕಕ್ಕ ತಿಳಿಸಿದ್ದಾರೆ. 

SCROLL FOR NEXT