ದೇಶ

ಕ್ರೈಸ್ತ ಬಾಂಧವರಿಗೆ ಇಂದು ಕ್ರಿಸ್ ಮಸ್ ಸಂಭ್ರಮ, ಸಡಗರ: ರಾಷ್ಟ್ರಪತಿ ಸೇರಿದಂತೆ ಗಣ್ಯರಿಂದ ಶುಭಾಶಯ

Sumana Upadhyaya

ನವದೆಹಲಿ: ಡಿಸೆಂಬರ್ 25, ಇಂದು ಕ್ರಿಸ್‌ಮಸ್. ನಾಡಿನ ಎಲ್ಲೆಡೆ ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆ ನಡೆಸುತ್ತಿದ್ದಾರೆ.

ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ವಿಶ್ವ ಹಾಗೂ ಭಾರತದಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಕೋವಿಡ್-19 ನಿಯಮ ಶಿಷ್ಟಾಚಾರ ಪಾಲನೆಯಲ್ಲಿರುವುದರಿಂದ ಕ್ರಿಸ್ ಮಸ್ ಹಬ್ಬದ ಸಂಭ್ರಮ, ಸಡಗರ ಈ ಬಾರಿ ಕೊಂಚ ಕಡಿಮೆಯಾಗಿದೆ.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಕ್ರೈಸ್ತ ಬಾಂಧವರಿಗೆ ಶುಭಾಶಯ ಕೋರಿದ್ದಾರೆ. ಯೇಸುಕ್ರಿಸ್ತನ ಜಯಂತಿ ಅಂಗವಾಗಿ ಕ್ರಿಸ್‌ಮಸ್ ಹಬ್ಬವನ್ನು ಶ್ರದ್ಧೆ ಹಾಗೂ ಸಂಭ್ರಮದ ಪ್ರತೀಕವಾಗಿ ಆಚರಣೆ ಮಾಡಲಾಗುವುದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂದೇಶದಲ್ಲಿ ತಿಳಿಸಿದ್ದಾರೆ.

ಕ್ರಿಸ್‌ಮಸ್, ಜನರ ಬದುಕಲ್ಲಿ ಶಾಂತಿ, ಸುಖ, ನೆಮ್ಮದಿ ಹಾಗೂ ಅನುಕಂಪ ಮೂಡಿಸುವ ಹಬ್ಬವಾಗಿದೆ. ಮಾನವ ಕುಲದಲ್ಲಿ ಸೌರ್ಹಾದತೆ ಕಾಯ್ದುಕೊಳ್ಳಲು ಮತ್ತು ಜಗತ್ತಿನಾದ್ಯಂತ ಶಾಂತಿ ನೆಲೆಸಲು ಈ ಹಬ್ಬ ಸಹಕಾರಿಯಾಗಲಿ ಎಂದು ಅವರು ಆಶಿಸಿದ್ದಾರೆ. ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಮಾನವೀಯತೆ ಮೆರೆಯಲು ಯೇಸುಕ್ರಿಸ್ತ ಪ್ರತಿಪಾದಿಸಿದ ಅನುಕಂಪ ಮತ್ತು ಕ್ಷಮಾದಾನದ ಮೌಲ್ಯಗಳನ್ನು ಪುನರ್ ಸ್ಥಾಪಿಸಲು ಕ್ರಿಸ್‌ಮಸ್ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬೆರೆತು ಸಂಭ್ರಮಿಸುವ ಹಬ್ಬ ಇದಾಗಿದೆ. ಕೋವಿಡ್-೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಅಗತ್ಯವೆಂದು ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ, ಕ್ರೈಸ್ತ ದೇವರ ಜೀವನ ಮತ್ತು ತತ್ವಗಳು ವಿಶ್ವದ ಕೋಟ್ಯಂತರ ಜನರಿಗೆ ಸ್ಪೂರ್ತಿ ತುಂಬಿದೆ. ಎಲ್ಲರೂ ಒಳಗೊಂಡ ಸಮಾಜ ನಿರ್ಮಾಣಕ್ಕೆ ಅವರು ತೋರಿಸಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದಿದ್ದಾರೆ.

ರಾಜ್ಯದ ಹಲವು ಭಾಗಗಳಲ್ಲಿ ಕ್ರಿಸ್ ಮಸ್ ನ್ನು ಕ್ರೈಸ್ತ ಬಾಂಧವರು ಆಚರಿಸುತ್ತಿದ್ದಾರೆ. ಚರ್ಚ್ ಗಳಲ್ಲಿ ಕಳೆದ ಮಧ್ಯರಾತ್ರಿಯಿಂದ ದೀಪಗಳು ಉರಿದು ಹಬ್ಬದ ಕಳೆಕಟ್ಟಿದ್ದವು. ಈ ಬಾರಿ ಕೊರೋನಾ ಕಾರಣದಿಂದಾಗಿ ಚರ್ಚ್ ಗಳಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಕಾಣಿಸಿಕೊಂಡಿಲ್ಲ.

SCROLL FOR NEXT