ದೇಶ

ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಪ್ರಸಾರವಾಗುತ್ತಿದ್ದ ವೇಳೆ ರೈತರಿಂದ 'ತಾಲಿ ಬಜಾವೊ'ಪ್ರತಿಭಟನೆ

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮ ಪ್ರಸಾರವಾಗುತ್ತಿದ್ದ ವೇಳೆ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಪಾತ್ರೆಗಳನ್ನು ಬಡಿದು ತಾಲಿ ಬಜಾವೊ(ಚಪ್ಪಾಳೆ ತಟ್ಟಿ) ಪ್ರತಿಭಟನೆ ನಡೆಸಿದ್ದಾರೆ.

ಪಂಜಾಬ್ ಮತ್ತು ಹರ್ಯಾಣ ಭಾಗದ ಹಲವು ರೈತರು ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ತಿಂಗಳಿನಿಂದ ಬೀಡುಬಿಟ್ಟಿದ್ದು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಸರ್ಕಾರದ ಪ್ರತಿನಿಧಿಗಳು ಮತ್ತು ರೈತ ಗುಂಪುಗಳೊಂದಿಗೆ ನಡೆದ ಮಾತುಕತೆ ಇದುವರೆಗೆ ಫಲಪ್ರದವಾಗಿಲ್ಲ. ತಮ್ಮ ಬೇಡಿಕೆಗಳಿಗೆ ಪ್ರಧಾನಿ ಸ್ಪಂದಿಸುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

ಕಳೆದ ಭಾನುವಾರ, ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಅವರು ಮನ್ ಕಿ ಬಾತ್ ಕಾರ್ಯಕ್ರಮದ ವೇಳೆ ತಾಲಿ ಬಜಾವೊ ಪ್ರತಿಭಟನೆ ನಡೆಸಲು ಕರೆಕೊಟ್ಟರು. ಪ್ರಧಾನಿಯವರು ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವೇಳೆ ರೈತರು, ನಿಮ್ಮ ಮಾತುಗಳಿಂದ ನಮಗೆ ಬೇಸತ್ತು ಹೋಗಿದೆ,ನಮ್ಮ ಮನದ ಮಾತುಗಳನ್ನು ಯಾವಾಗ ಕೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಗಾಜಿಪುರ್ ಮತ್ತು ಸಿಂಘು ಗಡಿಭಾಗದಲ್ಲಿ ಪ್ರತಿಭಟನಾ ನಿರತ ರೈತರು ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಪ್ರಸಾರವಾಗುತ್ತಿದ್ದ ವೇಳೆ ಪಾತ್ರೆಗಳನ್ನು ಬಡಿದು ವಿರೋಧ ವ್ಯಕ್ತಪಡಿಸಿದರು.

ತಾಲಿ ಬಜಾವೊ ಪರಿಕಲ್ಪನೆಯನ್ನು ಮೊದಲು ಆರಂಭಿಸಿದ್ದೇ ಪ್ರಧಾನ ಮಂತ್ರಿ ಮೋದಿಯವರು. ಕೊರೋನಾ ವಾರಿಯರ್ಸ್ ಗೆ ಪ್ರೋತ್ಸಾಹ ನೀಡುವ ಸಲುವಾಗಿ ದೇಶದ ನಾಗರಿಕರೆಲ್ಲರೂ ಒಟ್ಟು ಸೇರಿ ಚಪ್ಪಾಳೆ ತಟ್ಟಿ ಎಂದು ಲಾಕ್ ಡೌನ್ ನ ಮೊದಲ ಹಂತದಲ್ಲಿ ಕರೆ ಕೊಟ್ಟಿದ್ದರು.

SCROLL FOR NEXT