ದೇಶ

ದಯಮಾಡಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ: ಅರವಿಂದ್ ಕೇಜ್ರಿವಾಲ್ ಮನವಿ

Srinivasamurthy VN

ನವದೆಹಲಿ: ರೈತರು ತಮ್ಮ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದು, ದಯಮಾಡಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ ಪ್ರದೇಶಕ್ಕೆ ಭಾನುವಾರ ಕೇಜ್ರಿವಾಲ್‌ ಎರಡನೇ ಬಾರಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, 'ಕೇಂದ್ರದ ಯಾವುದೇ ಸಚಿವರು ರೈತರೊಂದಿಗೆ ಮುಕ್ತವಾದ ಚರ್ಚೆ ನಡೆಸುವ ಸವಾಲು ಸ್ವೀಕರಿಸಲಿ ಹಾಗೂ ಈ ಕಾಯ್ದೆಗಳು ಎಷ್ಟು ಉಪಯುಕ್ತ ಅಥವಾ  ಹಾನಿಕಾರಕ ಎಂಬುದು ಅದರಿಂದ ತಿಳಿಯುತ್ತದೆ. ರೈತರು ಅವರ ಉಳಿವಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾಯ್ದೆಗಳು ಅವರ ಭೂಮಿಯನ್ನು ಅವರಿಂದ ಕಸಿದುಬಿಡುತ್ತವೆ. ಕೇಂದ್ರ ಸರ್ಕಾರವನ್ನು ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ, ದಯಮಾಡಿ ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ ಎಂದು ಹೇಳಿದರು.

'ನಮ್ಮ ರೈತರು ಕಳೆದ 32 ದಿನಗಳಿಂದ ತೀವ್ರ ಚಳಿಯ ನಡುವೆಯೂ ತೆರೆದ ಬೀದಿಗಳಲ್ಲಿ ಮಲಗುತ್ತಿದ್ದಾರೆ. ಏಕೆ? 40 ಕ್ಕೂ ಹೆಚ್ಚು ಜನರು ಇಲ್ಲಿ ಪ್ರಾಣ ಕಳೆದುಕೊಂಡಿರುವುದು ನನಗೆ ನೋವು ತಂದಿದೆ. ಅವರ ಮಾತುಗಳನ್ನು ಕೇಳಿ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ನಾನು ಕೇಂದ್ರಕ್ಕೆ ಮನವಿ ಮಾಡುತ್ತೇನೆ  ಎಂದು ಕೇಜ್ರಿವಾಲ್ ಹೇಳಿದರು.

ದೆಹಲಿ-ಹರ್ಯಾಣ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಡಿಸೆಂಬರ್‌ 7ರಂದು ಕೇಜ್ರಿವಾಲ್‌ ಮೊದಲ ಬಾರಿಗೆ ಭಾಗಿಯಾಗಿದ್ದರು. ದೆಹಲಿಯ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸಹ ಜೊತೆಗಿದ್ದರು. ಈ ವೇಳೆ ದೆಹಲಿ ಸರ್ಕಾರದಿಂದ ಪ್ರತಿಭಟನಾ ನಿರತ ರೈತರಿಗಾಗಿ ಕೈಗೊಳ್ಳಲಾಗಿರುವ  ವ್ಯವಸ್ಥೆಯ ಬಗ್ಗೆ ಕೇಜ್ರಿವಾಲ್‌ ತಮ್ಮ ಮೊದಲ ಭೇಟಿಯಲ್ಲಿ ಪರಿಶೀಲಿಸಿದ್ದರು.

ಸಿಂಘು ಗಡಿ ಪ್ರದೇಶ ಅಷ್ಟೇ ಅಲ್ಲದೆ, ಪಂಜಾಬ್‌, ಹರ್ಯಾಣ ಹಾಗೂ ಉತ್ತರ ಪ್ರದೇಶದ ರೈತರು ದೆಹಲಿಯ ಇತರೆ ಗಡಿ ಪ್ರದೇಶಗಳಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.

SCROLL FOR NEXT