ದೇಶ

ಶಾಕಿಂಗ್: ಉತ್ತರ ಪ್ರದೇಶದಲ್ಲಿ ಭೂಗತ ಪಾತಕಿಗಳ ಭಾವಚಿತ್ರವಿರುವ ಅಂಚೆ ಚೀಟಿ ಮುದ್ರಣ!

Srinivasamurthy VN

ಲಖನೌ: ಉತ್ತರ ಪ್ರದೇಶ ಅಂಚೆ ಇಲಾಖೆ ಅವಾಂತರವೊಂದು ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಭೂಗತ ಪಾತಕಿಗಳ ಭಾವಚಿತ್ರವಿರುವ ಅಂಚೆ ಚೀಟಿ ಮುದ್ರಿಸುವ ಮೂಲಕ ಉತ್ತರ ಪ್ರದೇಶ ಅಂಚೆ ಇಲಾಖೆ ತೀವ್ರ ಟೀಕೆಗೆ ಗುರಿಯಾಗಿದೆ.

ಹೌದು.. ಉತ್ತರ ಪ್ರದೇಶ ಕಾನ್ಪುರ ಪಟ್ಟಣದ ಅಂಚೆ ಕಚೇರಿಯು ಭೂಗತ ಪಾತಕಿ ಛೋಟಾರಾಜನ್‌ ಮತ್ತು ಇತ್ತೀಚೆಗಷ್ಟೇ ಹತನಾಗಿದ್ದ ಭೂಗತಪಾತಕಿ ಮುನ್ನಾ ಭಜರಂಗಿ ಅವರ ಭಾವಚಿತ್ರವುಳ್ಳ ಅಂಚೆ ಚೀಟಿಯನ್ನು ಮುದ್ರಿಸಿದೆ. ಈ ಬಗ್ಗೆ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದ್ದು, ವರದಿಯಲ್ಲಿರುವಂತೆ ಕಾನ್ಪುರದ ಬಾರಾ  ಚೌರಾಹಾ ಪ್ರದೇಶದಲ್ಲಿರುವ ಜಿಪಿಒ, ಈ ಇಬ್ಬರು ಅಪರಾಧಿಗಳ ಚಿತ್ರಗಳನ್ನು ಒಳಗೊಂಡಿರುವ ಅಂಚೆ ಚೀಟಿಗಳನ್ನು ‘ಮೈ ಸ್ಟಾಂಪ್’ ಯೋಜನೆಯಡಿ ಮುದ್ರಿಸಿದೆ. ಆಸಕ್ತರು ನಿಗದಿತ ಶುಲ್ಕ ಪಾವತಿಸಿ ತಮ್ಮ ವ್ಯಕ್ತಿ ಚಿತ್ರವುಳ್ಳ ಅಂಚೆಚೀಟಿಯ ಹಾಳೆಗಳನ್ನು ಪಡೆಯಬಹುದು. ಈ ಸ್ಟಾಂಪ್‌ಗಳನ್ನು ಪತ್ರ, ಲಕೋಟೆ  ಕಳುಹಿಸಲು ಬಳಸಬಹುದು. ಇದಕ್ಕಾಗಿ ಅರ್ಜಿದಾರರರು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಗುರುತು ಖಾತರಿಪಡಿಸುವ ದಾಖಲೆಯನ್ನು ಅಂಚೆ ಅಧಿಕಾರಿಗಳಿಗೆ ನೀಡಬೇಕು ಎಂದು ಹೇಳಲಾಗಿದೆ. 

ಈ ವಿಚಾರ ಸುದ್ದಿಯಾಗುತ್ತಲೆ ಉತ್ತರ ಪ್ರದೇಶ ಅಂಚೆ ಇಲಾಖೆಯ ಕಾರ್ಯವೈಖರಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಈ ವಿಚಾರ ವೈರಲ್ ಆಗುತ್ತಲೇ ಎಚ್ಚೆತ್ತಿರುವ ಅಂಚೆ ಇಲಾಖೆ ಅಧಿಕಾರಿಗಳು, ಘಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸುವುದಾಗಿ ಹೇಳಿದ್ದಾರೆ. ಇನ್ನು ಮುಂದೆ  ದಾಖಲೆಗಳನ್ನು ಪರಿಶೀಲಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 

SCROLL FOR NEXT