ದೇಶ

ಬೆಂಗಳೂರಿನಲ್ಲಿ 3 ಸೇರಿ ದೇಶಾದ್ಯಂತ ರೂಪಾಂತರಿ ಕೊರೋನಾ ವೈರಸ್ ನ 6 ಪ್ರಕರಣಗಳು ಪತ್ತೆ!

Srinivas Rao BV

ಬೆಂಗಳೂರು: ಬ್ರಿಟನ್ ನಿಂದ ಭಾರತಕ್ಕೆ ಹಿಂದಿರುಗಿದ ಆರು ಮಂದಿಯಲ್ಲಿ ರೂಪಾಂತರಿತ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ಅವರಲ್ಲಿ ಮೂವರು ಬೆಂಗಳೂರಿಗರಾಗಿದ್ದಾರೆ ಎಂದು ತಿಳಿದು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದೆ.

ಹೊಸ ಯುಕೆ ರೂಪಾಂತರದ ಜೀನೋಮ್ ಸರ್ಸ್-ಕೋವಿಡ್ -2 ವೈರಸ್ ಭಾರತಕ್ಕೆ ಕಾಲಿಟ್ಟಿದೆ ಎಂದು ಜೀನೋಮಿಕ್ಸ್ ಕನ್ಸೋರ್ಟಿಯಂ (ಇನ್ಸಾಕಾಗ್) ಲ್ಯಾಬ್ಸ್ ಮಂಗಳವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

"ಯುಕೆಯಿಂದ ಹಿಂದಿರುಗಿದ ಆರು ಮಂದಿಯ ಮಾದರಿಗಳಲ್ಲಿ ಹೊಸ ಯುಕೆ ರೂಪಾಂತರ ಜೀನೋಮ್‌ ನೊಂದಿಗೆ ಪಾಸಿಟಿವ್ ಕಂಡುಬಂದಿದೆ. ಬೆಂಗಳೂರಿನ ನಿಮ್ಹಾನ್ಸ್‌ ನಲ್ಲಿ 3, ಹೈದರಾಬಾದ್‌ ನ ಸಿಸಿಎಂಬಿಯಲ್ಲಿ 2 ಮತ್ತು ಪುಣೆಯ ಎನ್‌ ಐವಿಯಲ್ಲಿ 1 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಎಲ್ಲ ವ್ಯಕ್ತಿಗಳನ್ನು ಆಯಾ ರಾಜ್ಯ ಸರ್ಕಾರಗಳು ಗೊತ್ತುಪಡಿಸಿದ ಆರೋಗ್ಯ ಕೇಂದ್ರಗಳಲ್ಲಿ ಒಂದೇ ಕೋಣೆಯಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಅವರ ನಿಕಟ ಸಂಪರ್ಕಿತರನ್ನು ಸಹ ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ಸಹ ಪ್ರಯಾಣಿಕರು, ಕುಟುಂಬದ ಸಂಪರ್ಕಿತರು ಮತ್ತು ಇತರ ಸಂಪರ್ಕಿರನ್ನು ಪತ್ತೆ ಹಚ್ಚಲು ಪ್ರಾರಂಭಿಸಲಾಗಿದೆ. ಇತರ ಮಾದರಿಗಳಲ್ಲಿ ಜೀನೋಮ್ ಪರೀಕ್ಷೆ ಪ್ರಗತಿಯಲ್ಲಿದೆ.

ನವೆಂಬರ್ 25 ರಿಂದ ಡಿಸೆಂಬರ್ 23 ರ ಮಧ್ಯರಾತ್ರಿಯವರೆಗೆ ಸುಮಾರು 33,000 ಪ್ರಯಾಣಿಕರು ಯುಕೆ ಯಿಂದ ವಿವಿಧ ಭಾರತೀಯ ವಿಮಾನ ನಿಲ್ದಾಣಗಳ ಮೂಲಕ ಆಗಮಿಸಿದ್ದಾರೆ.   

ಈ ಎಲ್ಲಾ ಪ್ರಯಾಣಿಕರನ್ನು ಕೋವಿಡ್ -19 ಪತ್ತೆ ಹಚ್ಚಲು ರಾಜ್ಯಗಳು ಆರ್‌ ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿದೆ. ಪರೀಕ್ಷಿಸಿದ ಎಲ್ಲಾ ಮಾದರಿಗಳಲ್ಲಿ, 114 ಮಾದರಿಗಳು ಈವರೆಗೆ ಕೋವಿಡ್ -19 ಪಾಸಿಟಿವ್ ಬಂದಿದೆ. ಈ ಪಾಸಿಟಿವ್ ಮಾದರಿಗಳನ್ನು ಜಿನೊಮ್ ಪರೀಕ್ಷೆಗಾಗಿ ಗಿ 10 ಇನ್ಸಾಕಾಗ್ ಲ್ಯಾಬ್‌ ಗಳಿಗೆ (ಎನ್‌ಐಬಿಎಂಜಿ ಕೋಲ್ಕತಾ, ಐಎಲ್ಎಸ್ ಭುವನೇಶ್ವರ, ಎನ್‌ಐವಿ ಪುಣೆ, ಸಿಸಿಎಸ್ ಪುಣೆ, ಸಿಸಿಎಂಬಿ ಹೈದರಾಬಾದ್, ಸಿಡಿಎಫ್‌ ಡಿ ಹೈದರಾಬಾದ್, ಇನ್‌ ಸ್ಟೆಮ್ ಬೆಂಗಳೂರು, ನಿಮ್ಹಾನ್ಸ್ ಬೆಂಗಳೂರು, ಐಜಿಐಬಿ ದೆಹಲಿ, ಎನ್‌ಸಿಡಿಸಿ ದೆಹಲಿ) ಕಳುಹಿಸಲಾಗಿದೆ.

"ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ. ಇನ್ಸಾಕಾಗ್ ಲ್ಯಾಬ್‌ ಗಳಿಗೆ ವರ್ಧಿತ ಕಣ್ಗಾವಲು, ನಿಯಂತ್ರಣ, ಪರೀಕ್ಷೆ ಮತ್ತು ಮಾದರಿಗಳನ್ನು ರವಾನಿಸಲು ನಿಯಮಿತ ಸಲಹೆಗಳನ್ನು ರಾಜ್ಯಗಳಿಗೆ ನೀಡಲಾಗುತ್ತಿದೆ" ಎಂದು ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೊಸ ಯುಕೆ ರೂಪಾಂತರದ ಕೋವಿಡ್ ಡೆನ್ಮಾರ್ಕ್, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರ ದೇಶಗಳಲ್ಲಿ ಈಗಾಗಲೇ ವರದಿಯಾಗಿದೆ.

SCROLL FOR NEXT