ದೇಶ

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬ್ರೇಕ್? ಅನಾರೋಗ್ಯ ಕಾರಣ ಪಕ್ಷ ಆರಂಭಿಸುವುದಿಲ್ಲ ಎಂದ 'ತಲೈವಾ'!

Sumana Upadhyaya

ಚೆನ್ನೈ: ಮುಂದಿನ ವರ್ಷದ ಆರಂಭದಲ್ಲಿ ರಾಜಕೀಯ ಪಕ್ಷ ಘೋಷಣೆ ಮಾಡುವುದಾಗಿ ಘೋಷಿಸಿಕೊಂಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ಕಾರಣದಿಂದ ತಮ್ಮ ಯೋಜನೆಯನ್ನು ರದ್ದುಗೊಳಿಸಿದ್ದಾರೆ.

ಇದೇ 31ರಂದು ತಮ್ಮ ರಾಜಕೀಯ ಪಕ್ಷ ಸ್ಥಾಪನೆಯನ್ನು ಘೋಷಿಸಲು ಮುಂದಾಗಿದ್ದರು ರಜನಿಕಾಂತ್. ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಸಜ್ಜಾಗುವುದಾಗಿಯೂ ಹೇಳಿಕೊಂಡಿದ್ದರು. ಆದರೀಗ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. 'ಅನ್ನತ್ತೆ' ಚಿತ್ರದ ಶೂಟಿಂಗ್ ಗೆಂದು ಹೈದರಾಬಾದಿಗೆ ಹೋಗಿದ್ದ ರಜನಿಕಾಂತ್ ಅವರ ಚಿತ್ರತಂಡದ ಸದಸ್ಯರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡು ಕ್ವಾರಂಟೈನ್ ಗೆ ಒಳಗಾಗಿದ್ದರು. ಆಗ ರಜನಿಕಾಂತ್ ಪರೀಕ್ಷೆ ಮಾಡಿಸಿಕೊಂಡಿದ್ದಾಗ ಕೊರೋನಾ ನೆಗೆಟಿವ್ ಬಂದಿದ್ದರೂ ಸುರಕ್ಷತೆ ದೃಷ್ಟಿಯಿಂದ ಸ್ವ ಕ್ವಾರಂಟೈನ್ ಗೆ ಒಳಗಾಗಿದ್ದರು.

ನಂತರ ಕಳೆದ ಡಿಸೆಂಬರ್ 25ರಂದು ಇದ್ದಕ್ಕಿದ್ದಂತೆ ತೀವ್ರ ರಕ್ತದೊತ್ತಡ ಮತ್ತು ಉಸಿರಾಟ ಸಮಸ್ಯೆಯುಂಟಾಗಿ ಆಸ್ಪತ್ರೆಗೆ ದಾಖಲಾದರು. ಅಲ್ಲಿ ಎರಡು ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದು, ರಜನಿಕಾಂತ್ ಅವರಿಗೆ ವೈದ್ಯರು ಒಂದು ವಾರ ಕಾಲ ವಿಶ್ರಾಂತಿ ಸೂಚಿಸಿದ್ದಾರೆ.

ಈ ಮಧ್ಯೆ ಮುಂದಿನ ವಾರ ರಾಜಕೀಯ ಪಕ್ಷ ಸ್ಥಾಪನೆಯನ್ನು ಘೋಷಿಸಬೇಕಿದ್ದ ರಜನಿಕಾಂತ್ ಇಂದು ಇದ್ದಕ್ಕಿದ್ದಂತೆ ಹೇಳಿಕೆ ಹೊರಡಿಸಿ ಅವರ ಅಭಿಮಾನಿಗಳಲ್ಲಿ ಹಲವರಿಗೆ ನಿರಾಶೆಯನ್ನುಂಟುಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಹೇಳಿಕೆ ಪ್ರಕಟಿಸಿರುವ ರಜನಿಕಾಂತ್, ತಮ್ಮ ಅನಾರೋಗ್ಯ ಕಾರಣದಿಂದ ತಳಮಟ್ಟದಲ್ಲಿ ಕೆಲಸ ಮಾಡಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ, ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಸೋಷಿಯಲ್ ಮೀಡಿಯಾ ಮತ್ತು ವರ್ಚುವಲ್ ಮಾಧ್ಯಮ ಮೂಲಕವೇ ಸದ್ಯದ ಮಟ್ಟಿಗೆ ಜನರ ಜೊತೆ ಸಂಪರ್ಕ ಇರಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ರಾಜಕೀಯ ಪಕ್ಷ ಸೇರ್ಪಡೆ ಸದ್ಯಕ್ಕೆ ಅಸಾಧ್ಯ ಎಂದು ಹೇಳಿಕೊಂಡಿದ್ದಾರೆ. 

ನಾನು ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ, ಚುನಾವಣಾ ರಾಜಕೀಯಕ್ಕೆ ಸೇರ್ಪಡೆಯಾಗದೆ ನನ್ನಿಂದಾದ ಮಟ್ಟಿಗೆ ಜನರ ಸೇವೆ ಮಾಡುತ್ತೇನೆ ಎಂದು ರಜನಿಕಾಂತ್ ಇಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

SCROLL FOR NEXT