ದೇಶ

ಗುಜರಾತ್ ಬಿಜೆಪಿ ಸಂಸದ ಯೂಟರ್ನ್, ರಾಜೀನಾಮೆ ಹಿಂಪಡೆಯಲು ಮನ್ಸುಖ್ ವಾಸವ ನಿರ್ಧಾರ

Lingaraj Badiger

ಅಹಮದಾಬಾದ್: ಬುಡಕಟ್ಟು ಜನರ ಪರ ಧ್ವನಿ ಎತ್ತಿದ್ದ ಗುಜರಾತ್ ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಮನ್ಸುಖ್ ವಾಸವ ಅವರು ಬುಧವಾರ ಯೂಟರ್ನ್ ಹೊಡೆದಿದ್ದು, ಪಕ್ಷಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ.

ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ಪಕ್ಷ ತೊರೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಬುಡಕಟ್ಟು ಪ್ರಾಬಲ್ಯದ ಭರೂಚ್ ನಿಂದ ಆರು ಬಾರಿ ಸಂಸದರಾಗಿರುವ ವಾಸವ ಅವರು ಹೇಳಿದ್ದಾರೆ. 

ನರ್ಮದಾ ಜಿಲ್ಲೆಯ 121 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಕೋರಿ ವಾಸವ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ವಾಸವ ಅವರು ನಿನ್ನೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಆದರೆ ಇಂದು ಯೂಟರ್ನ್ ಹೊಡೆದಿರುವ ಬಿಜೆಪಿ ಸಂಸದ, ನಾನು ಆನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೆ. ಆದರೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಇತರೆ ಬಿಜೆಪಿ ನಾಯಕರು, ನಾನು ಸಂಸದನಾಗಿ ಮುಂದುವರಿದರೆ ಮಾತ್ರ ನನ್ನ ಬೆನ್ನು ನೋವು ಮತ್ತು ಕುತ್ತಿಗೆ ನೋವಿಗೆ ಉಚಿತ ಚಿಕಿತ್ಸೆ ಪಡೆಯಬಹುದು. ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಇದು ಸಾಧ್ಯವಿಲ್ಲ. ಪಕ್ಷದ ಮುಖಂಡರು ನನ್ನನ್ನು ವಿಶ್ರಾಂತಿ ಪಡೆಯಲು ಕೇಳಿದರು ಮತ್ತು ಸ್ಥಳೀಯ ಪಕ್ಷದ ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಹೀಗಾಗಿ ನಾನು ರಾಜೀನಾಮೆ ಹಿಂಪಡೆಯುತ್ತಿದ್ದೇನೆ ಎಂದು ವಾಸವ ಹೇಳಿದ್ದಾರೆ.

ನರ್ಮದಾ ಜಿಲ್ಲೆಯ ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ, ವಿಶೇಷವಾಗಿ ಪರಿಸರ ಸಂವೇದನಾ ವಲಯದಲ್ಲಿ 121 ಗ್ರಾಮಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಸರ್ಕಾರ ಅಥವಾ ಆಡಳಿತಾರೂಢ ಬಿಜೆಪಿಯೊಂದಿಗೆ ಅಸಮಾಧಾನಗೊಂಡಿದ್ದಾರೆ ಎಂಬುದು ತಪ್ಪು ಕಲ್ಪನೆ ಎಂದು ಬುಡಕಟ್ಟು ಮುಖಂಡ ಹೇಳಿದ್ದಾರೆ.

SCROLL FOR NEXT