ದೇಶ

ಅನ್ಯಗ್ರಹ ಜೀವಿ..?: ಜಗತ್ತಿನಾದ್ಯಂತ ರಾತ್ರೋ ರಾತ್ರಿ ಕಾಣಿಸಿಕೊಂಡಿದ್ದ ನಿಗೂಢ ಏಕಶಿಲೆ, ಭಾರತದಲ್ಲೂ ಪತ್ತೆ... ಎಲ್ಲಿ ಗೊತ್ತಾ?

Srinivasamurthy VN

ಅಹ್ಮದಾಬಾದ್‌: ಜಗತ್ತಿನ ಹಲವೆಡೆ ಪತ್ತೆಯಾಗಿ ಬೆರಗು ಮೂಡಿಸಿದ್ದ 'ನಿಗೂಢ ಏಕಶಿಲೆ" ಇದೀಗ ಭಾರತದಲ್ಲೂ ರಾತ್ರೋ ರಾತ್ರಿ ಪತ್ತೆಯಾಗುವ ಮೂಲಕ ಅಚ್ಚರಿ ಮೂಡಿಸಿದೆ.

ಹೌದು. ಈ ಬಗ್ಗೆ ಆಂಗ್ಲ ಪತ್ರಿಕೆಗಳು ಮತ್ತು ಸ್ಥಳೀಯ ಸುದ್ದಿ ವಾಹಿನಿ ವರದಿ ಮಾಡಿದ್ದು, ಈ ಹಿಂದೆ ಈ ನಿಗೂಢ ಏಕಶಿಲೆ ರೋಮಾನಿಯಾ, ಫ್ರಾನ್ಸ್, ಪೋಲೆಂಡ್, ಬ್ರಿಟನ್ ಮತ್ತು ಕೊಲಂಬಿಯಾ ಸೇರಿದಂತೆ ಜಗತ್ತಿನ ಸುಮಾರು 30 ನಗರಗಳಲ್ಲಿ ಪತ್ತೆಯಾಗಿತ್ತು. ಇದೀಗ ಭಾರತದಲ್ಲೂ ಈ ನಿಗೂಢ ಏಕಶಿಲೆ ಪತ್ತೆಯಾಗಿದ್ದು. ಶಿಲೆಯ ಮೇಲೆ  ನಿಗೂಢ ರಚನೆಗಳೂ ಕೂಡ ಇವೆ ಎಂದು ಹೇಳಲಾಗಿದೆ.

ಗುಜರಾತ್ ನ ರಾಜಧಾನಿ ಅಹಮದಾಬಾದ್‌ನಲ್ಲಿರುವ ಥಲ್ಟೇಜ್ ಏರಿಯಾದಲ್ಲಿರುವ ಸಿಂಫೋನಿ ಪಾರ್ಕ್‌ನಲ್ಲಿ ಈ ನಿಗೂಢ ಏಕಶಿಲೆ ಕಂಡುಬಂದಿದೆ. ಸದ್ಯ ಪತ್ತೆಯಾಗಿರುವ ಏಕಶಿಲೆಯನ್ನು ಲೋಹದಿಂದ ಮಾಡಲಾಗಿದ್ದು, ಅಂದಾಜು 6 ಅಡಿ ಇದೆ ಎಂದು ಹೇಳಲಾಗಿದೆ. ದೇಶದಲ್ಲಿ ಏಕಶಿಲೆ ಕಂಡುಬಂದಂತಹ ಮೊದಲ  ಪ್ರಕರಣ ಇದಾಗಿದೆ.ಈ ನಿಗೂಢ ಏಕಶಿಲೆಯನ್ನು ನೆಲದ ಮೇಲೆ ನಿರ್ಮಿಸಿರುವಂತೆ ಕಾಣುತ್ತದೆ. ಆದರೆ, ಎಲ್ಲಿಯೂ ನೆಲವನ್ನು ಅಗೆದು ನೆಟ್ಟಿರುವ ಗುರುತುಗಳು ಪತ್ತೆಯಾಗಿಲ್ಲ. ಸ್ಥಳೀಯರಿಗೂ ಸಹ ಏಕಶಿಲೆ ಹೇಗೆ ಬಂತು ಎಂಬುದರ ಸುಳಿವು ಕೂಡ ಇಲ್ಲ. ಪಾರ್ಕಿನ ಒಳಗೂ ಸಹ ಯಾರನ್ನು ನೋಡಲಿಲ್ಲ ಎಂದು  ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸ್ಥಳೀಯರೊಬ್ಬರು ನಾನು ಸಂಜೆ ಮನೆಗೆ ಹೋಗುವಾಗ ಏಕಶಿಲೆ ಅಲ್ಲಿರಲಿಲ್ಲ. ಆದರೆ, ಮಾರನೇ ದಿನ ಬೆಳಗ್ಗೆ ಕೆಲಸಕ್ಕೆ ಬರುವಾಗ ಏಕಶಿಲೆಯನ್ನು ನೋಡಿ ಚಕಿತಗೊಂಡೆ ಎಂದಿದ್ದಾರೆ.

ತ್ರಿಕೋನ ಮಾದರಿಯಲ್ಲಿರುವ ಏಕಶಿಲೆಯ ಮೇಲ್ಸ್‌ನಲ್ಲಿ ಕೆಲವು ಸಂಖ್ಯೆಗಳು ಮತ್ತು ಚಿಹ್ನೆಗಳಿವೆ. ಹೀಗಾಗಿ ಈ ಏಕಶಿಲೆಯ ಮೂಲವನ್ನು ತಿಳಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಅಂತೆಯೇ ಈ ಏಕಶಿಲೆ ಇದೀಗ ಬಹುಚರ್ಚಿತ ವಿಷಯವಾಗಿದ್ದು, ಪಾರ್ಕ್ ನಲ್ಲಿರುವ ಈ ಏಕಶಿಲೆ ಸೆಲ್ಸಿ ಮತ್ತು ಫೋಟೋ  ಕೇಂದ್ರವಾಗಿದೆ.

ಇನ್ನು ಇದೇ ರೀತಿಯ ನಿಗೂಢ ಏಕಶಿಲೆ ಜಗತ್ತಿನಾದ್ಯಂತ ಸುಮಾರು 30ಕ್ಕೂ ಹೆಚ್ಚು ನಗರಗಳಲ್ಲಿ ಪತ್ತೆಯಾಗಿವೆ. ಮೊದಲ ಬಾರಿಗೆ ಅಮೆರಿಕದ ಉಟಾಹ್ ಮರೂಭೂಮಿಯಲ್ಲಿ ಪತ್ತೆಯಾಗಿತ್ತು. ಆ ಬಳಿಕ ರೋಮಾನಿಯಾ, ಫ್ರಾನ್ಸ್, ಪೋಲೆಂಡ್, ಯುಕೆ ಮತ್ತು ಕೊಲಂಬಿಯಾ ರಾಷ್ಟ್ರಗಳಲ್ಲೂ ಪತ್ತೆಯಾಗಿದೆ. ಇತ್ತೀಚೆಗೆ  ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಈ ನಿಗೂಢ ಶಿಲೆ ಪತ್ತೆಯಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. 

ಇತ್ತೀಚೆಗಷ್ಟೇ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ರೇಡಿಯೋ ಅಲೆ ಹೊರಹೊಮ್ಮುವಿಕೆಯನ್ನು ಕಂಡುಹಿಡಿದಿದ್ದರು. ಇದು ಇತರೆ ಗ್ರಹಗಳಲ್ಲಿರಬಹುದಾದ ಶಂಕಿತ ಅನ್ಯಗ್ರಹ ಜೀವಿಗಳಿಂದ ಬಂದ ರೇಡಿಯೋ ತರಂಗವೋ ಇಲ್ಲ.. ಬಾಹ್ಯಾಕಾಶದಲ್ಲಿ ಉಂಟಾದ ಪ್ರಕ್ರಿಯಿಂದ ಉಂಟಾದ ರೇಡಿಯೋ ತರಂಗವೋ ಎಂಬುದನ್ನು  ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಈ ಘಟನೆ ಬೆನ್ನಲ್ಲೇ ಭೂಮಿಯಲ್ಲಿ ನಿಗೂಢ ಏಕಶಿಲೆಗಳು ಪತ್ತೆಯಾಗುತ್ತಿರುವು ಅನ್ಯಗ್ರಹ ಜೀವಿಗಳ ಇರುವಿಕೆಯ ಕುರಿತು ಮತ್ತೆ ಚರ್ಚೆ ಆರಂಭವಾಗುವಂತೆ ಮಾಡಿದೆ.

SCROLL FOR NEXT