ದೇಶ

ತಮಿಳುನಾಡು ವಿಧಾನಸಭಾ ಚುನಾವಣೆ: ತಲೈವಾ ಸಪೋರ್ಟ್ ಯಾರಿಗೆ? ರಜನಿಯತ್ತ ಪಕ್ಷಗಳ ಚಿತ್ತ!

Lingaraj Badiger

ಮಧುರೈ/ಚೆನ್ನೈ: ಕೊರೋನಾ ಸಾಂಕ್ರಾಮಿಕದ ಕಾರಣ ನೀಡಿ, ಪಕ್ಷ ಘೋಷಣೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಹಿಂದೆ ಸರಿದ ಬೆನ್ನಲ್ಲೇ ಅವರ ಬೆಂಬಲ ಪಡೆಯಲು ರಾಷ್ಟ್ರೀಯ ಹಾಗೂ ಸ್ಥಳೀಯ ಪಕ್ಷಗಳು ಮುಂದಾಗಿವೆ.

ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳು ಮಾತ್ರ ಬಾಕಿಯಿರುವ ಕಾರಣ ಬಹುಪಾಲು ಪಕ್ಷಗಳ ಚಿತ್ತ ತಲೈವಾ ಬೆಂಬಲ ಪಡೆಯುವತ್ತ ನೆಟ್ಟಿದೆ. ಪ್ರಮುಖವಾಗಿ ಬಿಜೆಪಿಯೇ ಅಲ್ಲದೆ, ನಟ ಹಾಗೂ ಮಕ್ಕಳ್ ನೀದಿ ಮಯಮ್ ಪಕ್ಷದ ಮುಖಂಡ ಕಮಲಹಾಸನ್ ಅವರೂ ತಮ್ಮ ಬಹುಕಾಲದ ಗೆಳೆಯ ರಜನಿಯ ಸಪೋರ್ಟ್ ಪಡೆಯಲು ತೀರ್ಮಾನಿಸಿದ್ದಾರೆ.

ತಮಿಳುನಾಡಿನ ಉಸ್ತುವಾರಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು, ''ಪ್ರಧಾನಿ ನರೇಂದ್ರ ಮೋದಿಯವರು ರಜನಿಕಾಂತ್ ಅವರಿಗೆ ಎಷ್ಟು ಆತ್ಮೀಯರು ಎಂಬುದು ಎಲ್ಲರಿಗೂ ತಿಳಿದಿದೆ” ಎಂದು ಹೇಳುವ ಮೂಲಕ ಅವರ ಬೆಂಬಲ ಪಡೆಯುವ ಸುಳಿವು ನೀಡಿದ್ದಾರೆ.

“ರಜನಿಕಾಂತ್ ತಮ್ಮದೇ ರಾಜಕೀಯ ಪಕ್ಷವನ್ನು ಏಕೆ ಘೋಷಿಸಲಿಲ್ಲ ಎಂಬುದು ಅವರ ವೈಯಕ್ತಿಕ ನಿರ್ಧಾರ. ಆದರೆ, ದೇಶದ ಮತ್ತು ತಮಿಳುನಾಡಿನ ಹಿತದೃಷ್ಟಿಯಿಂದ ಅವರು ಎನ್ ಡಿಎಗೆ ಬೆಂಬಲವನ್ನು ನೀಡುವರೆಂದು ಆಶಿಸುತ್ತೇನೆ” ಎಂದಿದ್ದಾರೆ. 

ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಕೂಡ ಭವಿಷ್ಯದಲ್ಲಿ ರಜನಿಕಾಂತ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಇಚ್ಛಿಸಿದ್ದಾರೆ. "ನಾನು 2021 ಮತ್ತು ನಂತರ 2024ರಲ್ಲಿ ಅವರ ಬೆಂಬಲ ಎದುರು ನೋಡುತ್ತಿದ್ದೇನೆ. ಅವರು ನೂರ್ಕಾಲ ಉತ್ತಮ ಆರೋಗ್ಯದಿಂದ ಇರಲಿ” ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT