ದೇಶ

ಇಂಡಿಗೋಗೆ ಲೀಗಲ್ ನೋಟಿಸ್ ನೀಡಿದ ಕುನಾಲ್ ಕಾಮ್ರಾ, 25 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

Lingaraj Badiger

ನವದೆಹಲಿ: ವಿಮಾನದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ 6 ತಿಂಗಳುಗಳ ಕಾಲ ಪ್ರಯಾಣ ನಿರ್ಬಂಧ ವಿಧಿಸಿರುವ ಇಂಡಿಗೋಗೆ ಲೀಗಲ್ ನೋಟಿಸ್ ನೀಡಿರುವ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು, ಬೇಷರತ್ ಕ್ಷಮೆಯಾಚಿಸಬೇಕು ಮತ್ತು ತಮ್ಮ ಮೇಲಿನ ನಿರ್ಬಂಧ ತೆರವುಗೊಳಿಸಬೇಕು ಎಂದು ವಿಮಾನಯಾನ ಸಂಸ್ಥೆಗೆ ಆಗ್ರಹಿಸಿದ್ದಾರೆ. ಅಲ್ಲದೆ ತಮಗೆ ನಿರ್ಬಂಧ ವಿಧಿಸಿದ್ದಕೆ 25 ಲಕ್ಷ ರೂಪಾಯಿ ಪರಿಹಾರವನ್ನು ಸಹ ಕೇಳಿದ್ದಾರೆ.

ಕಾಮ್ರಾ ವಕೀಲರು ಇಂಡಿಗೋ ವಿಮಾನಯಾನ ಸಂಸ್ಥೆಗೆ ಶುಕ್ರವಾರ ಲೀಗಲ್ ನೋಟಿಸ್ ನೀಡಿದ್ದು, ತಮ್ಮ ಕಕ್ಷಿದಾರನಿಗೆ ಮಾನಸಿಕ ಹಿಂಸೆ ನೀಡಿದಕ್ಕೆ ಮತ್ತು ಪ್ರಯಾಣ ನಿರ್ಬಂಧದಿಂದ ದೇಶದ ವಿವಿಧ ಭಾಗದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ನಷ್ಟ ಅನುಭವಿಸಿದ್ದಾರೆ. ಇದಕ್ಕಾಗಿ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಇನ್ನು ಕಾಮ್ರಾ ಲೀಗಲ್ ನೋಟಿಸ್ ಬಗ್ಗೆ ಇಂಡಿಯೋ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚಿಗೆ ಮುಂಬೈನಿಂದ ಲಖನೌಗೆ ವಿಮಾನದಲ್ಲಿ ತೆರಳುತ್ತಿದ್ದ ವೇಳೆ ಕುನಾಲ್ ಕಾಮ್ರಾ ಅವರು ಅರ್ನಬ್‌ ಗೋಸ್ವಾಮಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಅರ್ನಬ್ ಹಾಸ್ಯ ಕಲಾವಿದನ ಯಾವುದೇ ಪ್ರಶ್ನೆಗೂ ಉತ್ತರಿಸದೆ ಮೌನವಾಗಿದ್ದರು. ಆದರೆ, ಕಾಮ್ರಾ ಮತ್ತಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಇದರ ವಿಡಿಯೊ ಮಾಡಿದ್ದ ಕಾಮ್ರಾ ಟ್ವೀಟ್ ಕೂಡ ಮಾಡಿದ್ದರು. ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಕಾಮ್ರಾ ಅವರು ಅರ್ನಬ್ ಗೆ ನೀವು ಪತ್ರಕರ್ತರೋ ಅಥವಾ ಹೇಡಿಯೋ? ನೀವು ಸರ್ಕಾರದ ವಕ್ತಾರರಂತೆ ವರ್ತಿಸುತ್ತಿರುವ ನೀವು ನೈಜ ಪತ್ರಕರ್ತರೇ? ಎಂದು ಪ್ರಶ್ನಿಸಿದ್ದರು.

ವಿಮಾನದಲ್ಲಿ ವಿಡಿಯೋ ಮಾಡಿ ಅರ್ನಬ್ ಗೋಸ್ವಾಮಿ ಅವರನ್ನು ಹೀಯಾಳಿಸಿದ ಕುನಾಲ್ ಕಾಮ್ರಾ ಅವರಿಗೆ ಇಂಡಿಗೋ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ನಿರ್ಬಂಧ ಹೇರಿದ್ದವು.

SCROLL FOR NEXT