ದೇಶ

ನಕ್ಷತ್ರ, ಚಂದ್ರನನ್ನು ಕೇಳಿದ್ದೆನೇ?: ಬಿಜೆಪಿ ಜೊತೆಗಿನ ಮೈತ್ರಿ ಬಿರುಕು ಕುರಿತು ಉದ್ಧವ್ ಠಾಕ್ರೆ

Manjula VN

ಮುಂಬೈ: ನೀಡಿದ್ದ ಭರವಸೆಗಳನ್ನು ಮುರಿದಾಗ ಅದರ ವಿರುದ್ಧ ಕೋಪ ಬರುವುದು ಸಾಮಾನ್ಯ. ನಾನೇನು ನಕ್ಷತ್ರ ಮತ್ತು ಚಂದ್ರನನ್ನು ಕೇಳಿದ್ದೆನೇ? ಎಂದು ಬಿಜೆಪಿ ಜೊತೆಗಿನ ಮೈತ್ರಿ ಬಿರುಕು ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. 

ಶಿವಸೇನೆ ಮುಖವಾಣಿ ಸಾಮ್ನಾ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ಉದ್ಧವ್ ಠಾಕ್ರೆಯವರು, ಬಿಜೆಪಿ ಮೈತ್ರಿ ಮುರಿದ್ದರಿಂದ ನನಗೆ ಯಾವುದೇ ಆಶ್ಚರ್ಯ, ಆಘಾತವಾಗಿರಲಿಲ್ಲ. ಶಿವಸೇನೆ ಸಂಸ್ಥಾಪಕ ಬಾಳಸಾಹೇಬ್ ಠಾಕ್ರೆಯವರ ಪುತ್ರನಾನು. ಸಾಕಷ್ಟು ಮಂದಿ ನನಗೆ ಆಘಾತ ನೀಡಲು ಯತ್ನ ನಡೆಸಿದ್ದರು. ಆದರೆ, ಅವರಾರು ಯಶಸ್ವಿಯಾಗಲಿಲ್ಲ. ಯಾವುದೇ ಕ್ಷೇತ್ರ, ವಿಚಾರದಲ್ಲಿಯೇ ಆದರು, ತಳ್ಳುವುದು, ಎಳೆದಾಟ ಸಾಮಾನ್ಯ. ಅವುಗಳನ್ನು ನಾವು ಒಪ್ಪಿಕೊಳ್ಳಬೇಕು. ಮುಖ್ಯಮಂತ್ರಿ ಸ್ಥಾನ ನನಗೆ ಆಶ್ಚರ್ಯವೇನೂ ತರಿಸಿರಲಿಲ್ಲ. ಮುಖ್ಯಮಂತ್ರಿ ಕನಸಾಗುವುದೂ ಕೂಡ ನನಗಿರಲಿಲ್ಲ. ಬಾಳಸಾಹೇಬ್ ಠಾಕ್ರೆಯವರಿಗೆ ನೀಡಿದ್ದ ಪ್ರಮಾಣವನ್ನು ಪೂರ್ಣಗೊಳಿಸಲು ಯಾವುದೇ ಮಟ್ಟಕ್ಕೆ ಬೇಕಾದರೂ ಇಳಿಯಲು ನಾನು ಸಿದ್ಧನಿದ್ದೆ ಎಂಬುದನ್ನು ಮಾತ್ರ ನಾನು ಹೇಳಬಲ್ಲೆ ಎಂದು ಹೇಳಿದ್ದಾರೆ. 

ರಾಜ್ಯದ ಮುಖ್ಯಮಂತ್ರಿಯಾಗುವುದು ಬಾಳಸಾಹೇಬ್ ಠಾಕ್ರೆಯವರಿಗೆ ನೀಡಿದ್ದ ಪ್ರಮಾಣವಾಗಿರಲಿಲ್ಲ. ಆದರೆ, ಅವರಿಗೆ ನೀಡಿದ್ದ ಪ್ರಮಾಣವನ್ನು ಪೂರ್ಣಗೊಳಿಸಲು ಇದೂ ಒಂದು ಹೆಜ್ಜೆಯಾಗಿತ್ತು. ನನ್ನ ತಂದೆಗೆ ನಾನು ನೀಡಿದ್ದ ಪ್ರತೀ ಭರವಸೆಯನ್ನೂ ಪೂರ್ಣಗೊಳಿಸುತ್ತೇನೆ. ಇನ್ನೂ ಸಾಕಷ್ಟು ಆಶ್ಚರ್ಯ ಹಾಗೂ ಆಘಾತಗಳು ಕಾದಿವೆ. ಅದನ್ನು ಜನರು ಇಷ್ಟಪಡಲಿ ಬಿಡಲಿ, ಆದರೆ, ಅದು ಪ್ರಮುಖವಾಗಿದೆ. ಎನ್'ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿ ಕುರಿತು ನಾನು ಈ ಹಿಂದೆಯೇ ಮಾತನಾಡಿದ್ದೆ. ಭರವಸೆ ನೀಡಿ, ಅದಕ್ಕೆ ತದ್ವಿರುದ್ಧವಾಗಿ ನಡೆಯುವುದು ಸರಿಯಲ್ಲ. ಭರವಸೆ ಮುರಿದಾಗ ಕೋಪ, ನೋವಾಗುವುದು ಸಾಮಾನ್ಯ. ಆಘಾತದಿಂದ ಬಿಜೆಪಿ ಈಗಾಲಾದರೂ ಹೊರ ಬಂದಿದಯೋ, ಇಲ್ಲವೋ ಎಂಬುದು ನನಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ. 

ನೀಡಿದ್ದ ಭರವಸೆಯಂತೆಯೇ ಬಿಜೆಪಿ ನಡೆದುಕೊಂಡಿದ್ದಿದ್ದರೆ ಇಂತಹ ಯಾವುದೇ ಬೆಳವಣಿಗೆಗಳೂ ಆಗುತ್ತಿರಲಿಲ್ಲ. ನಾನು ಅಂತಹದ್ದೇನನ್ನು ಕೇಳಿದ್ದೆ? ನಕ್ಷತ್ರ, ಚಂದ್ರ ಬೇಕೆಂದು ಕೇಳಿದ್ದೆನೇ? ಲೋಕಸಭಾ ಚುನಾವಣೆಗೂ ಮುನ್ನ ನಡೆದಿದ್ದ ಮಾತುಕತೆಯಂತೆಯೇ ನಾನು ಆಗ್ರಹಗಳನ್ನು ಮುಂದಿಟ್ಟಿದ್ದೆವು. ಸೀಟು ಹಂಚಿಕೆ ಬಗ್ಗೆ ಎರಡೂ ಪಕ್ಷಗಳ ನಡುವೆ ಮಾತುಕತೆ ನಡೆದಿತ್ತು. ಮಾತುಕತೆಯಂತೆಯೇ ನಾವು ಕೇಳಿದ್ದೆವು. ಆದರೆ, ಬಿಜೆಪಿಯವರು ಭರವಸೆಯಂತೆ ನಡೆದುಕೊಳ್ಳಲಿಲ್ಲ. ಮಹಾರಾಷ್ಟ್ರದಲ್ಲಿ ನಡೆದ ಬೆಳವಣಿಗೆಗಳನ್ನು ಇಡೀ ದೇಶವೇ ನೋಡಿದೆ. ಇನ್ನು ಈ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ ಎಂದಿದ್ದಾರೆ. 

SCROLL FOR NEXT