ದೇಶ

ಭೂ ಕಬಳಿಸಿ ದರ್ಪ ತೋರಿದ ಮುಖಂಡ: ಪ್ರತಿಭಟಿಸಿದ್ದಕ್ಕೆ ಶಿಕ್ಷಕಿ ಕೈಕಾಲು ಕಟ್ಟಿ ಅಮಾನವೀಯ ಮೆರೆದ ಟಿಎಂಸಿ ಕಾರ್ಯಕರ್ತರು

Manjula VN

ಕೋಲ್ಕತಾ: ರಸ್ತೆ ನಿರ್ಮಾಣಕ್ಕಾಗಿ ಭೂಮಿ ಕಬಳಿಸಿದ್ದೂ ಅಲ್ಲದೆ, ವಿರೋಧ ವ್ಯಕ್ತಪಡಿಸಿದ್ದೆ ಶಿಕ್ಷಕಿಯೊಬ್ಬರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ, ರಸ್ತೆಯ ಮೇಲೆ ಎಳೆದೊಯ್ದು ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ ಪುರ್ ನ ಗಂಗ್ರಾಮ್ ಪುರ್ ಎಂಬಲ್ಲಿ ನಡೆದಿದೆ. 

ಸ್ಥಳೀಯ ಪಂಚಾಯತ್ ನ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡ ಸೇರಿದಂತೆ ಕೆಲ ಟಿಎಂಸಿ ಕಾರ್ಯಕರ್ತರು ಶಿಕ್ಷಕಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತ್ತಿದೆ. 

ಶಿಕ್ಷಕಿಗೆ ಸೇರಿದ್ದ ಭೂಮಿಯನ್ನು ಬಲವಂತವಾಗಿ ಆಕ್ರಮಣ ಮಾಡಿ ರಸ್ತೆ ನಿರ್ಮಿಸಲು ಪಂಚಾಯತ್ ಮುಖಂಡರು ಮುಂದಾಗಿದ್ದರು. ಇದರ ವಿರುದ್ಧ ಶಿಕ್ಷಕಿ ಪ್ರತಿಭಟಿಸಿದ್ದರು. ಇದಕ್ಕೆ ಆಕ್ರೋಶಗೊಂಡ ಮುಖಂಡ ಹಾಗೂ ಆತನ ಬೆಂಬಲಿಗರು, ಶಿಕ್ಷಕಿಯ ಕೈಕಾಲುಗಳನ್ನು ಕಟ್ಟಿ ರಸ್ತೆಯ ಮೇಲೆ ಎಳೆದೊಯ್ದಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪಂಚಾಯತ್ ಮುಖಂಡನನ್ನು ತೃಣಮೂಲ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರ್ಪಿತಾ ಘೋಷ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. 

ಘಟನೆ ವೇಳೆ ಶಿಕ್ಷಕಿಯ ರಕ್ಷಣೆಗೆ ಧಾವಿಸಿದ್ದ ತಾಯಿ ಹಾಗೂ ಸಹೋದರಿಗೂ ಟಿಎಂಸಿ ಕಾರ್ಯಕರ್ತರು ಥಳಿಸಿದ್ದಾರೆಂದು ಹೇಳಲಾಗುತ್ತಿದೆ. 

ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ಆರಂಭದಲ್ಲಿಯೇ ಮನೆ ಮುಂಭಾಗದಲ್ಲಿ 12 ಅಡಿ ಜಾಗ ನೀಡಲಾಗಿತ್ತು. ಆದರೆ, ಪಂಚಾಯತ್ ಮುಖಂಡರು ಹಾಗೂ ಸದಸ್ಯರು ನಮಗೆ ಮಾಹಿತಿ ನೀಡದೆಯೇ, ಯಾವುದೇ ಪರಿಹಾರವನ್ನೂ ನೀಡದೆಯೇ ರಸ್ತೆಗೆ 24 ಅಡಿ ಜಾಗ ಕಬಳಿಕೆ ಮಾಡಿಕೊಂಡು ನಿರ್ಮಾಣಕ್ಕೆ ಮುಂದಾಗಿದ್ದರು. ಇದರಿಂದ ನಮ್ಮ ಬಹುತೇಕ ಜಾಗ ನಾಶಗೊಳ್ಳುತ್ತದೆ. ನಮಗೆ ನಷ್ಟವಾಗುತ್ತದೆ ಎಂದು ಶಿಕ್ಷಕಿ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ. 

ಘಟನೆ ಬಳಿಕ ಗ್ರಾಮಸ್ಥರು ಶಿಕ್ಷಕಿ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ರಕ್ಷಣೆ ಮಾಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಎಲ್ಲರೂ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 

SCROLL FOR NEXT