ದೇಶ

ಸಿಯಾಚಿನ್ ಸೈನಿಕರಿಗೆ ದಿನಸಿ, ಬಟ್ಟೆಗೆ ಪರದಾಟ: ಸಿಎಜಿ ವರದಿಯಲ್ಲಿ ಭಾರತೀಯ ಸೇನೆಯ ಅವ್ಯವಸ್ಥೆ ಅನಾವರಣ

Sumana Upadhyaya

ನವದೆಹಲಿ: ದೇಶ ಕಾಯುವ ಸೈನಿಕರ ದುಸ್ಥಿತಿಗೆ ಕನ್ನಡಿ ಹಿಡಿದಿರುವಂತಿದೆ ನಿನ್ನೆ ಸಂಸತ್ತಿನಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ಸಲ್ಲಿಸಿರುವ ವರದಿ. ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಸೇವಾ ನಿರತರಾಗಿರುವ ಸೈನಿಕರು ಸರಿಯಾಗಿ ತಿನ್ನಲು ಆಹಾರವಿಲ್ಲದೆ, ಆ ಪ್ರದೇಶಕ್ಕೆ ಹೊಂದಿಕೆಯಾಗುವ ಸೂಕ್ತ ಉಡುಪುಗಳನ್ನು ಹೊಂದಿರದೆ ಪರದಾಡುತ್ತಿದ್ದಾರೆ ಎಂದು ವರದಿ ಹೇಳುತ್ತದೆ.


ಲಡಾಕ್, ಸಿಯಾಚಿನ್ ನಂತಹ ಹಿಮಚ್ಛಾದಿತ ಎತ್ತರದ ಕ್ಷಿಷ್ಟಕರ ಪ್ರದೇಶಗಳಲ್ಲಿ ಸೈನಿಕರಿಗೆ ಊಟ, ತಿಂಡಿ, ಉಡುಪು, ವಸತಿಗಳಿಗೆ ಸರಿಯಾದ ವಿಶೇಷ ವ್ಯವಸ್ಥೆಯಿರಬೇಕಾಗುತ್ತದೆ. ಇಲ್ಲಿನ ಸೈನಿಕರು ಹಿಮ ಕನ್ನಡಕಗಳು, ಬೂಟುಗಳು, ಆ ಪ್ರದೇಶಕ್ಕೆ ಹೊಂದಿಕೆಯಾಗುವ ಉಡುಪುಗಳು ಮತ್ತು ಇತರ ಸಲಕರಣೆಗಳನ್ನು ಹೊಂದಿರಬೇಕಾಗುತ್ತದೆ. ಆದರೆ ಭಾರತೀಯ ಸೇನೆ ಇವುಗಳನ್ನು ಸರಿಯಾಗಿ, ಸೂಕ್ತ ಸಮಯಕ್ಕೆ ಒದಗಿಸುತ್ತಿಲ್ಲ. ಸೈನಿಕರಿಗೆ ಹಳೆಯ, ಮರುಬಳಕೆ ವಸ್ತುಗಳನ್ನು ನೀಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.


ಸರಿಯಾದ ಊಟ, ತಿಂಡಿಯ ವ್ಯವಸ್ಥೆಯಿಲ್ಲದೆ ಸೈನಿಕರು ಸೇವಿಸುವ ಆಹಾರ ಗಣನೀಯ ಇಳಿಕೆಯಾಗಿರುವುದಲ್ಲದೆ ತಡವಾಗಿ ವಸ್ತುಗಳನ್ನು ನೀಡುತ್ತಾರೆ. ಇದರಿಂದ ಸೈನಿಕರ ದೈನಂದಿನ ಬದುಕಿಗೆ ಕಷ್ಟವಾಗುತ್ತಿದೆ. 2015ರಿಂದ ಸೈನಿಕರಿಗೆ ಸರಿಯಾಗಿ ರೇಷನ್, ಬೂಟು, ಹಿಮ ಕನ್ನಡಕ, ಫೇಸ್ ಮಾಸ್ಕ್, ಜಾಕೆಟ್, ಸ್ಲೀಪಿಂಗ್ ಬ್ಯಾಗ್, ಉಡುಪಿನ ಸೌಲಭ್ಯ ನೀಡುತ್ತಿಲ್ಲ. ಹೀಗಾಗಿ ಹಳೆಯ ಬೂಟುಗಳು, ಉಡುಪುಗಳನ್ನೇ ಸೈನಿಕರು ಬಳಸಬೇಕಾಗಿದೆ, ಇದು ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಿಎಜಿ ಹೇಳಿದೆ.


1999ರಲ್ಲಿ ಕಾರ್ಗಿಲ್ ಪರಿಶೀಲನಾ ಸಮಿತಿ ಶಿಫಾರಸು ಮಾಡಿದ ಭಾರತೀಯ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ವಿಳಂಬವೇಕೆ ಆಗುತ್ತಿದೆ ಎಂದು ಸಹ ಸಿಎಜಿ ಪ್ರಶ್ನೆ ಮಾಡಿದೆ. ರಕ್ಷಣಾ ಇಲಾಖೆ ಭೂಮಿಯ ಲೀಸ್ ನ್ನು ನವೀಕರಣ ಮಾಡಲು ವಿಳಂಬವಾಗಿದ್ದರಿಂದ ರಕ್ಷಣಾ ಸಚಿವಾಲಯಕ್ಕೆ ಆದ 25.48 ಕೋಟಿ ರೂಪಾಯಿ ನಷ್ಟವನ್ನು ಸಹ ವರದಿಯಲ್ಲಿ ಪ್ರಶ್ನೆ ಮಾಡಲಾಗಿದೆ.  

SCROLL FOR NEXT