ದೇಶ

ತಮಿಳುನಾಡು: 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ರದ್ದುಪಡಿಸಿದ ಸರ್ಕಾರ

Nagaraja AB

ಚೆನ್ನೈ:  ತಮಿಳುನಾಡಿನಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಇಲ್ಲ ಎಂದು ಸರ್ಕಾರ ಮಂಗಳವಾರ ಪ್ರಕಟಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ನಿರಾಳಪಡುವಂತಾಗಿದೆ

ಈ ಸಂಬಂಧ ಶಿಕ್ಷಣ ಸಚಿವ ಕೆ. ಎ. ಸೆಂಗೊಟ್ಟೈಯಾನ್  ಆದೇಶವೊಂದನ್ನು ಹೊರಡಿಸಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವಂತೆ 2019 ಸೆಪ್ಟೆಂಬರ್ 13 ರಂದು ಹೊರಡಿಸಲಾಗಿರುವ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. 

ಈ ಪರೀಕ್ಷೆ ಬಗ್ಗೆ ಶಿಕ್ಷಣ ವಲಯದ ವಿವಿಧ ಪಾಲುದಾರರಿಂದ ಅನೇಕ ಪ್ರತಿಕ್ರಿಯೆ ಹಾಗೂ ಟೀಕೆಗಳು ಬಂದಿದ್ದವು. ಇವೆಲ್ಲವುಗಳನ್ನು ಪರಿಗಣಿಸಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಕೆಲ ದಿನಗಳ ಹಿಂದೆ 8ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ. ಬೋರ್ಡ್ ಪರೀಕ್ಷೆಯ ಒತ್ತಡದಿಂದ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ಶಂಕಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ಬೋರ್ಡ್  ಪರೀಕ್ಷೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.

SCROLL FOR NEXT