ದೇಶ

ಈಗಿರುವ ಕಾನೂನಿನ ಅಡಿ 'ಲವ್ ಜಿಹಾದ್' ಬಗ್ಗೆ ವ್ಯಾಖ್ಯಾನವಿಲ್ಲ, ಯಾವುದೇ ಪ್ರಕರಣ ವರದಿಯಾಗಿಲ್ಲ:ಕೇಂದ್ರ ಸರ್ಕಾರ 

Sumana Upadhyaya

ನವದೆಹಲಿ: ಈಗಿರುವ ಕಾನೂನಿನಡಿ ಲವ್ ಜಿಹಾದ್ ಎಂಬ ಶಬ್ದವನ್ನು ವ್ಯಾಖ್ಯಾನಿಸಿಲ್ಲ ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಯಾವುದೇ ಕೇಸುಗಳು ದಾಖಲಾಗಿಲ್ಲ ಎಂದು ಸದನದಲ್ಲಿ ಸರ್ಕಾರ ತಿಳಿಸಿದೆ.


ನಿನ್ನೆ ಲೋಕಸಭೆಯಲ್ಲಿ ಈ ಕುರಿತು ಲಿಖಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ, ಈಗ ಅಸ್ಥಿತ್ವದಲ್ಲಿರುವ ಕಾನೂನಿನಡಿ ಲವ್ ಜಿಹಾದ್ ಎಂಬ ಶಬ್ದವನ್ನು ವ್ಯಾಖ್ಯಾನಿಸಿಲ್ಲ. ಕೇಂದ್ರದ ಸಂಸ್ಥೆಗಳಿಂದ ಲವ್ ಜಿಹಾದ್ ಕೇಸುಗಳು ಯಾವುದೂ ವರದಿಯಾಗಿಲ್ಲ ಎಂದರು.


ಸಂವಿಧಾನ ವಿಧಿ 25ನ್ನು ಉಲ್ಲೇಖಿಸಿ ಮಾತನಾಡಿದ ಸಚಿವರು, ಇದು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಸಮಾಜದ ಕ್ಷೇಮಕ್ಕೆ ಒಳಪಟ್ಟು ಧರ್ಮವನ್ನು ಘೋಷಿಸಲು, ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯವನ್ನು ಒದಗಿಸುತ್ತದೆ ಎಂದರು. 


ಕೇರಳದಲ್ಲಿ ಲವ್ ಜಿಹಾದ್ ಕೇಸು ವರದಿಯಾಗಿದೆ ಎಂದು ಕಾಂಗ್ರೆಸ್ ಸಂಸದ ಬೆನ್ನಿ ಬೆಹನನ್ ಹೇಳಿ ಯಾವುದಾದರೂ ಕೇಂದ್ರೀಯ ಸಂಸ್ಥೆಗಳು ಕಳೆದ ಎರಡು ವರ್ಷಗಳಲ್ಲಿ ಕೇರಳ ರಾಜ್ಯದಲ್ಲಿ ಲವ್ ಜಿಹಾದ್ ಕೇಸುಗಳಾದ ಬಗ್ಗೆ ವರದಿ ನೀಡಿವೆಯೇ ಎಂದು ಕೇಳಿದ ಪ್ರಶ್ನೆಗೆ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಹೀಗೆ ಉತ್ತರಿಸಿದರು.


ಆದರೆ ಕೇರಳದಲ್ಲಿ ಅಂತರ ಧರ್ಮ ಮದುವೆಯ ಎರಡು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ಮಾಡಿದೆ. ಲವ್ ಜಿಹಾದ್ ಕೇಸು ಇಲ್ಲ ಎಂದು ಅಧಿಕೃತವಾಗಿ ಸರ್ಕಾರ ಹೇಳುತ್ತಿರುವುದು ಇದೇ ಮೊದಲು. 


ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿ ಮಧ್ಯೆ ಪ್ರೀತಿಯಾಗಿ ಮದುವೆಯಾಗುವುದಕ್ಕೆ ಬಲಪಂಥೀಯ ನಾಯಕರು ಲವ್ ಜಿಹಾದ್ ಎಂದು ಹೇಳಿಕೊಂಡು ಬರುತ್ತಿದ್ದು, ಯುವತಿಯರನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡಲು ದುರುದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಾರೆ.

SCROLL FOR NEXT