ದೇಶ

ನಿರ್ಭಯಾ ಅಪರಾಧಿಗಳಿಗೆ ಗಲ್ಲು: ಸುಪ್ರೀಂನಿಂದ ನಾಳೆ ಕೇಂದ್ರದ ಅರ್ಜಿಯ ವಿಚಾರಣೆ

Lingaraj Badiger

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲ ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಬೇಕು ಎಂಬ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಡೆಸಲಿದೆ.

ಕೇಂದ್ರದ ಪರವಾಗಿ ಹೆಚ್ಚುವರಿ ಸೊಲಿಸಿಟರ್ ಜನರಲ್ ಕೆಎಂ ನಟರಾಜ್ ಅವರು, ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರ ಪೀಠಕ್ಕೆ ಮನವಿ ಮಾಡಿದರು. ಸುಪ್ರೀಂ ಪೀಠ ನಾಳೆ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆಯನ್ನು ತಡೆಹಿಡಿದ ದೆಹಲಿ ಪಟಿಯಾಲ ಹೌಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್, ನಾಲ್ವರು ಅಪರಾಧಿಗಳನ್ನೂ ಒಟ್ಟಿಗೇ ಗಲ್ಲಿಗೇರಿಸಬೇಕು. ಬೇರೆಬೇರೆಯಾಗಿ ನೇಣಿಗೆ ಹಾಕುವಂತಿಲ್ಲ ಎಂದು ತೀರ್ಪು ನೀಡಿತ್ತು.

ಹೈಕೋರ್ಟ್ ತೀರ್ಪು ನೀಡಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿವೆ.

ನಿರ್ಭಯಾ ಅಪರಾಧಿಗಳು ಯಾವುದೇ ಕಾನೂನು ಪ್ರಕ್ರಿಯೆ ಕೈಗೊಳ್ಳುವುದಿದ್ದರೂ, ಅರ್ಜಿ ಸಲ್ಲಿಸುವುದಿದ್ದರೂ ಇನ್ನೊಂದು ವಾರದಲ್ಲಿ ಅದನ್ನೆಲ್ಲ ಪೂರ್ತಿಗೊಳಿಸಿಕೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಅಪರಾಧಿಗಳಾದ ಮುಕೇಶ್ ಕುಮಾರ್​ ಸಿಂಗ್​, ಪವನ್​ ಗುಪ್ತಾ, ವಿನಯ್​ ಕುಮಾರ್​ ಶರ್ಮಾ, ಅಕ್ಷಯ್​ ಕುಮಾರ್​ರನ್ನು ಫೆ.1ರಂದು ನೇಣಿಗೆ ಏರಿಸಬೇಕಿತ್ತು. ಆದರೆ ಈ ಮಧ್ಯೆ ಕೆಲವು ಕಾನೂನು ಪ್ರಕ್ರಿಯೆಗಳಿಂದಾಗಿ ದೆಹಲಿ ನ್ಯಾಯಾಲಯ ಅವರ ಮರಣದಂಡನೆಗೆ ತಡೆ ನೀಡಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು. ಫೆ.2ರಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಸುರೇಶ್​ ಕುಮಾರ್ ಕೈಟ್​ ತೀರ್ಪು ಕಾಯ್ದಿರಿಸಿದ್ದರು.

SCROLL FOR NEXT