ದೇಶ

ಸಿಎಎ, ಅಸ್ಸಾಂ ಒಪ್ಪಂದದ ಅನುಷ್ಠಾನವನ್ನು ಪ್ರಶ್ನಿಸಿ ಅರ್ಜಿ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟೀಸ್

Raghavendra Adiga

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಸಾಂವಿಧಾನಿಕ ಸಿಂಧುತ್ವ ಮತ್ತು ಅಸ್ಸಾಂ ಒಪ್ಪಂದದ ಪರಿಣಾಮಕಾರಿ ಅನುಷ್ಠಾನವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಅಸ್ಸಾಂ ಸೋಷಿಯಲ್ ಜಸ್ಟೀಸ್ ಫೋರಮ್ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರನ್ನೊಳಗೊಂಡ ನ್ಯಾಯಪಿಠ ಈ ನೋಟೀಸ್ ಜಾರಿ ಮಾಡಿದೆ.

1985 ರ ಅಸ್ಸಾಂ ಒಪ್ಪಂದವನ್ನು ಜಾರಿಗೆ ತರಲು ಮತ್ತು ಅಸ್ಸಾಂನ ಸ್ಥಳೀಯ ಜನರ ವಿಶಿಷ್ಟ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳಸಂರಕ್ಷಣೆಗಾಗಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಅರ್ಜಿಯು ಸೂಕ್ತ ನಿರ್ದೇಶನಗಳನ್ನು ಕೋರಿದೆ. 

1985ರ ಅಸ್ಸಾಂ ಒಪ್ಪಂದ  ತಮ್ಮ ಧರ್ಮವನ್ನು ಲೆಕ್ಕಿಸದೆ ಎಲ್ಲಾ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ದಿನಾಂಕವನ್ನು ನಿಗದಿಪಡಿಸಿತ್ತು  ಮಾರ್ಚ್ 24, 1971 ರ ನಂತರ ಭಾರತದೊಳಕ್ಕೆ ಬಂದ ಎಲ್ಲಾ ಅಕ್ರಮ ವಲಸಿಗರನ್ನು ಅವರ ಧರ್ಮ, ಜಾತಿಗಳನ್ನು ಪರಿಗಣಿಸದೆ ಹೊರಹಾಕಬೇಕೆಂದು ಈ ಒಪ್ಪಂದದಲ್ಲಿ ಹೇಳಲಾಗಿತ್ತು. ಇನ್ನು ಸುಪ್ರೀಂ ಕೋರ್ಟ್  ಸಿಎಎಗೆ ಸವಾಲು ಹಾಕುವ ಮತ್ತೊಂದು ಹೊಸ ಮನವಿಗಳ ಗುಚ್ಚವನ್ನು ಸಹ ಗಮನಿಸಿದ್ದು ಇದಕ್ಕ್ರೆ ಕೇಂದ್ರದ ಪ್ರತಿಕ್ರಿಯೆಯನ್ನು ಕೋರಿದೆ.

ಮಹಾರಾಷ್ಟ್ರದ ವಕೀಲರ ಸಂಘವು ಸಲ್ಲಿಸಿದ ಅರ್ಜಿಗಳಲ್ಲಿ ಒಂದು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಾರತಮ್ಯ, ಅನಿಯಂತ್ರಿತ ಮತ್ತು ಕಾನೂನುಬಾಹಿರವೆಂದು ಘೋಷಿಸ ಹೇಳಿದೆ. ಮತ್ತೊಂದೆಡೆ, ದೇಶಾದ್ಯಂತ ವಿರೋಧ ಮತ್ತು ಪ್ರತಿಭಟನೆಗಳನ್ನು ಎದುರಿಸುತ್ತಿರುವ ತಿದ್ದುಪಡಿ ಮಾಡಿದ ಪೌರತ್ವ ಕಾನೂನಿನ ಬಗೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಮತ್ತು ಕೇಂದ್ರಕ್ಕೆ ನಿರ್ದೇಶನ ನಿಡಬೇಕೆಂದು ಕೋರಿ  ನೂರಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಕಾಯುತ್ತಿವೆ.

SCROLL FOR NEXT