ದೇಶ

ಮಂಗಳೂರಿಗೆ ತೆರಳುತ್ತಿದ್ದ ಎರಡು ರೈಲುಗಳಲ್ಲಿ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದರೋಡೆ! 

Srinivas Rao BV

ಕೋಯಿಕ್ಕೋಡ್: ಮಂಗಳೂರಿಗೆ ತೆರಳುತ್ತಿದ್ದ ಎರಡು ಪ್ರತ್ಯೇಕ ರೈಲುಗಳಲ್ಲಿ ಎರಡು ಕುಟುಂಬಗಳಿಂದ ಬರೊಬ್ಬರಿ 20 ಲಕ್ಷ ರೂಪಾಯಿ ಮೌಲ್ಯದ ವಜ್ರದ ಚಿನ್ನಾಭರಣ, ನಗದು ದರೋಡೆ ಮಾಡಲಾಗಿದೆ. 

ಚೆನ್ನೈ-ಮಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಹಾಗು ತಿರುವನಂತಪುರಂ-ಮಂಗಳೂರು ಮಲ್ಬಾರ್ ಎಕ್ಸ್ ಪ್ರೆಸ್ ರೈಲುಗಳ ಹವಾನಿಯಂತ್ರಿತ ಬೋಗಿಗಳಲ್ಲಿ ಈ ದರೋಡೆ ಪ್ರಕರಣ ನಡೆದಿದೆ. 

ಚೆನ್ನೈ-ಮಂಗಳೂರು ರೈಲಿನ ಘಟನೆ ತಿರುಪುರ್-ತಿರೂರಿನಲ್ಲಿ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. 54 ವರ್ಷದ ಮಹಿಳಾ ಪ್ರಯಾಣಿಕರಾದ ಪೊನ್ನಿಮಾರನ್ ಅವರ ದೂರಿನ ಪ್ರಕಾರ 15 ಲಕ್ಷ ರೂಪಾಯಿ ಮೌಲ್ಯದ ವಜ್ರ, ಚಿನ್ನದ ಭರಣಗಳಿದ್ದ ಬ್ಯಾಗ್, 22,000 ರೂಪಾಯಿ ನಗದು ಕಳ್ಳತನವಾಗಿದೆ. ತಕ್ಷಣೆವೇ ಎಚ್ಚೆತ್ತ ಕುಟುಂಬ ಸದಸ್ಯರು ಪೊಲೀಸ್ ಹಾಗೂ ಆರ್ ಪಿಎಫ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಮುಂದಿನ ನಿಲ್ದಾಣದಲ್ಲಿಯೇ ಪೊಲೀಸರು ಕುಟುಂಬದಿಂದ ಹೇಳಿಕೆಗಳನ್ನು ಪಡೆದಿದ್ದಾರೆ. 

ಮಲ್ಬಾರ್ ಎಕ್ಸ್ ಪ್ರೆಸ್ ರೈಲಿನ ಘಟನೆ ವಡಕರ ಹಾಗೂ ಮಹೇ ನಿಲ್ದಾಣಗಳಲ್ಲಿ ನಡೆದಿದ್ದು, ಸಿಂಗಪೂರ್ ನಿಂದ ನೆಡುಂಬಸ್ಸೆರಿ ಏರ್ ಪೋರ್ಟ್ ಗೆ ಬಂದು, ನಂತರ ಮಲ್ಬಾರ್ ಎಕ್ಸ್ ಪ್ರೆಸ್ ಮೂಲಕ ಕಣ್ಣೂರಿಗೆ ತೆರಳುತ್ತಿದ್ದ ಕುಟುಂಬದವರಿಂದ ಸುಮಾರು 9 ಸವರನ್ ಚಿನ್ನ ಕಳ್ಳತನವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಪಿಎಫ್ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದೆ. 

SCROLL FOR NEXT