ದೇಶ

ಬಡ್ತಿ ಮೀಸಲಾತಿ; ಲೋಕಸಭೆಯಲ್ಲಿ ವಿಪಕ್ಷದಿಂದ ಕಲಾಪ ಬಹಿಷ್ಕಾರ, ಪರಿಶೀಲಿಸಿದ ಬಳಿಕ ಕ್ರಮ ಎಂದ ಸರ್ಕಾರ

Nagaraja AB

ನವದೆಹಲಿ: ಉದ್ಯೋಗ ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕು ಅಲ್ಲ ಎಂಬ ಸುಪ್ರೀಂ  ಕೋರ್ಟ್‌ನ ಆದೇಶದ ವಿರುದ್ಧ  ಕಾಂಗ್ರೆಸ್, ಡಿಎಂಕೆ ಸೇರಿದಂತೆ  ಪ್ರತಿಪಕ್ಷ ಸದಸ್ಯರು ಸೋಮವಾರ ಲೋಕಸಭೆಯಲ್ಲಿ ಧರಣಿ ನಡೆಸಿ ಕಲಾಪ ಬಹಿಷ್ಕರಿಸಿದರು.

ಇದೇ ವೇಳೆ ಸರ್ಕಾರ, ಈ ವಿಷಯವನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿತು.ಈ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

"ಈ ವಿಷಯದಲ್ಲಿ ಸರ್ಕಾರವು ಪ್ರತಿವಾದಿಯಲ್ಲ. ಸರಿಯಾದ ಪರಿಶೀಲನೆಯ ನಂತರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ವಿವಾದಾತ್ಮಕ ಮಾರ್ಚ್ 20, 2018 ರ ತೀರ್ಪನ್ನು ರದ್ದುಪಡಿಸಿದ 2018 ರ ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್  ಎತ್ತಿಹಿಡಿದಿದೆ.

ಉತ್ತರಾಖಂಡ ಸರ್ಕಾರದ  2012 ರ ಅಧಿಸೂಚನೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಬಡ್ತಿಗಳಲ್ಲಿ ಮೀಸಲಾತಿ  ನೀಡಲು ರಾಜ್ಯ ಸರ್ಕಾರಕ್ಕೆ ಕಡ್ಡಾಯವಲ್ಲ. ಹೈಕೋರ್ಟ್ ರಾಜ್ಯದ ನಿರ್ಧಾರವನ್ನು ಕಾನೂನುಬಾಹಿರ  ಎಂದು ಘೋಷಿಸಬಾರದು ಎಂದು ತೀರ್ಪು ನೀಡಿತ್ತು.ಈ ಸಂದರ್ಭದಲ್ಲಿ, ಕೇಂದ್ರವು ಪ್ರತಿವಾದಿಯಲ್ಲ, 2012 ರಲ್ಲಿ ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು ಎಂದು ತೋಮರ್ ಹೇಳಿದರು.

ಈ ವೇಳೆ ಪ್ರತಿಪಕ್ಷದ ಸದಸ್ಯರು  ಪ್ರತಿಭಟಿಸಿ, ಮಾತನಾಡಲು ಬಯಸಿದ್ದರು ಆದರೆ ಸ್ಪೀಕರ್ ಓಂ ಬಿರ್ಲಾ ಅವರು  ಸರ್ಕಾರದ ಹೇಳಿಕೆ ನೀಡಿದ ನಂತರ ಈ ವಿಷಯದ ಬಗ್ಗೆ ಮಾತನಾಡಲು ಅವಕಾಶವಿಲ್ಲ ಎಂದು  ಹೇಳಿದರು.ಪ್ರತಿಭಟನೆಯ ಮಧ್ಯೆ, ಪ್ರತಿಪಕ್ಷ ಸದಸ್ಯರು ಹೊರನಡೆದರು.

ಶೂನ್ಯವೇಳೆಯಲ್ಲಿ ಬಿಜೆಪಿ ನೇತೃತ್ವದ ಉತ್ತರಾಖಂಡ ಸರ್ಕಾರದ ನಡೆ ರಾಷ್ಟ್ರೀಯವಾದವಲ್ಲ, ಅದು 'ಮನುವಾದ' ಎಂದು ಕಾಂಗ್ರೆಸ್ ಮುಖಂಡ ಅಧೀರ್  ರಂಜನ್ ಚೌಧರಿ ಟೀಕಿಸಿದರು.ಬಡ್ತಿಗಳಲ್ಲಿ ಎಸ್‌ಸಿ / ಎಸ್‌ಟಿಗಳಿಗೆ ಮೀಸಲಾತಿ ನೀಡುವುದು ರಾಜ್ಯ ಸರ್ಕಾರದ  ಸಾಂವಿಧಾನಿಕ ಜವಾಬ್ದಾರಿಯಲ್ಲ ಎಂದು ಉತ್ತರಾಖಂಡ ಸರ್ಕಾರ ಸುಪ್ರೀಂಕೋರ್ಟ್ ಮುಂದೆ  ಸ್ಪಷ್ಟಪಡಿಸಿತ್ತು ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಅಂದಿನ  ಉತ್ತರಾಖಂಡ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ 2012 ರಲ್ಲಿ ಅರ್ಜಿ  ಸಲ್ಲಿಸಿದ್ದರಿಂದ ಈ ಪ್ರಕರಣದಲ್ಲಿ ಬಿಜೆಪಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ. ಆಗ,  ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು ಎಂದು ಅವರು ಹೇಳಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ಸ್ಪಷ್ಪಪಡಿಸಿದರು.

SCROLL FOR NEXT