ದೇಶ

ಚುನಾವಣೆಯತ್ತ ದೀದಿ ಚಿತ್ತ: ಉಚಿತ ವಿದ್ಯುತ್, ಕಾರ್ಮಿಕರಿಗೆ ಮನೆ ಸೇರಿ ಹಲವು ಜನಪ್ರಿಯ ಯೋಜನೆ ಘೋಷಿಸಿದ ಮಮತಾ

Lingaraj Badiger

ಕೋಲ್ಕತಾ: 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಜನತೆಗೆ ಷರತ್ತುಬದ್ಧ ಉಚಿತ ವಿದ್ಯುತ್ ಸೇರಿದಂತ ಹಲವು ಜನಪ್ರಿಯ ಯೋಜನೆಗಳನ್ನು ಸೋಮವಾರ ಘೋಷಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಉಚಿತ ವಿದ್ಯುತ್ ಯೋಜನೆಯನ್ನು ಕಾಪಿ ಮಾಡಿರುವ ದೀದಿ, ಬಡವರಿಗೆ ಮೂರು ತಿಂಗಳಿಗೆ 75 ಯುನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ 2020-21ನೇ ಸಾಲಿನ ಬಜೆಟ್ ಮಂಡಿಸಿದ ಪಶ್ಚಿಮ ಬಂಗಾಳ ಹಣಕಾಸು ಸಚಿವ ಅಮಿತ್ ಮಿತ್ರಾ ಅವರು, ಎಸ್ಸಿ ಹಾಗೂ ಎಸ್ಟಿ ವರ್ಗದ 60 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ ತಲಾ 1 ಸಾವಿರ ರೂ ಪಿಂಚಣಿ, ಚಹಾ ತೋಟದ ಖಾಯಂ ಕೆಲಸಗಾರರಿಗೆ ಗೃಹ ನಿರ್ಮಾಣ ಯೋಜನೆ, ಮುಂದಿನ ಮೂರು ವರ್ಷಗಳಲ್ಲಿ 100 ಹೊಸ ಎಂಎಸ್ ಎಂಇ ಪಾರ್ಕ್ಸ್ ಗಳನ್ನು ರಾಜ್ಯಾದ್ಯಂತ ನಿರ್ಮಿಸಲಾಗುವುದು ಎಂದು ಹೇಳಿದರು.

ಇದು ಮಮತಾ ಬ್ಯಾನರ್ಜಿ ಸರ್ಕಾರ ಮಂಡಿಸಿದ ಪೂರ್ಣಪ್ರಮಾಣದ ಕೊನೆಯ ಬಜೆಟ್ ಆಗಿದ್ದು, 2021ಕ್ಕೆ ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಮುಂದಿನ ವರ್ಷದೊಳಗೆ ಎಂಎಸ್ ಎಂಇ(ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮ ಸಚಿವಾಲಯ) ಪಾರ್ಕ್ಸ್ ನಿರ್ಮಾಣಕ್ಕೆ 200 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಚಹಾ ತೋಟದ ಕಾರ್ಮಿಕರ ಗೃಹ ನಿರ್ಮಾಣ(ಚಾಯ್ ಸುಂದರಿ) ಯೋಜನೆಗಾಗಿ 500 ಕೋಟಿ ರೂಪಾಯಿ ಕಾಯ್ದಿರಿಸಿದೆ. ಈ ಯೋಜನೆಯಿಂದ ರಾಜ್ಯದ 370 ಟೀ ಗಾರ್ಡನ್ಸ್ ಗಳಲ್ಲಿ ಇರುವ ಸುಮಾರು 3 ಲಕ್ಷ ಕಾರ್ಮಿಕರಿಗೆ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಪ್ರಾಬಲ್ಯ ಹೊಂದಿರುವ ಝಾರ್ ಗ್ರಾಮ್ ನಲ್ಲಿ ನೂತನ ವಿವಿ ಸ್ಥಾಪಿಸುವುದಾಗಿ ಪಶ್ಚಿಮಬಂಗಾಳ ಸರ್ಕಾರ ಘೋಷಿಸಿದ್ದು, ಹಿಂದುಳಿದ ವರ್ಗಕ್ಕೂ ವಿವಿ ಸ್ಥಾಪಿಸುವುದಾಗಿ ತಿಳಿಸಿದೆ.

SCROLL FOR NEXT