ದೇಶ

ಶಾಹೀನ್'ಭಾಗ್ ನಲ್ಲಿ ಸಿಎಎ ವಿರುದ್ದ ಪ್ರತಿಭಟನೆ: ಪ್ರತಿಭಟನೆ ತೆರವು ಅರ್ಜಿ ಕುರಿತು ಸುಪ್ರೀಂನಲ್ಲಿ ವಿಚಾರಣೆ

Manjula VN

ನವದೆಹಲಿ: ದೇಶದಾದ್ಯಂತ ತೀವ್ರ ಚರ್ಚೆ ಹಾಗೂ ಟೀಕೆಗಳಿಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ದೆಹಲಿಯ ಶಾಹೀನ್ ಭಾಗ್ ಹೋರಾಟ ಪ್ರಕರಣ ಕುರಿತಂತೆ ಪ್ರತಿಭಟನೆ ತೆರವುಗೊಳಿಸುವಂತೆ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳಲಿದೆ. 

ಕೆಲ ದಿನಗಳ ಹಿಂದಷ್ಟೇ ಈ ಕುರಿತ ಅರ್ಜಿಯ ವಿಚಾರಣೆ ಸರ್ವೋಚ್ಛ ನ್ಯಾಯಾಲಯದ ಅಂಗಳಕ್ಕೆ ಬಂದಿತ್ತು. ಆದರೆ, ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಈ ವಿಚಾರವನ್ನು ನ್ಯಾಯಾಲಯ ಕೈಗೆತ್ತಿಕೊಳ್ಳುವ ಯಾವುದೇ ನಿರ್ಣಯ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತ್ತು. 

ಈ ವೇಳೆ ಶಾಹೀನ್ ಭಾಗ್ ಪ್ರತಿಭಟನೆ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಹಾಗೂ ಕೆ.ಎಂ.ಜೋಸೆಫ್ ಒಳಗೊಂಡ ದ್ವಿಸದಸ್ಯ ಪೀಠ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಈ ಕುರಿತು ಶಾಹೀನ್ ಭಾಗ್ ಪ್ರತಿಭಟನೆಯಲ್ಲಿ ಸಮಸ್ಯೆಯಿದೆ ಎಂಬುದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಇದನ್ನು ಹೇಗೆ ಪರಿಹರಿಸಬೇಕೆಂಬುದನ್ನು ನಾವು ನೋಡಬೇಕಿದೆ. ಆದರೆ, ಈ ಪ್ರಕರಣವನ್ನು ಸೋಮವಾರ ವಿಚಾರಣೆ ನಡೆಸುವುದೇ ಸೂಕ್ತ. ಈ ವೇಳೆಗಾಗಲೇ ನಾವು ಮತ್ತಷ್ಟು ಉತ್ತಮ ಸ್ಥಾನದಲ್ಲಿರುತ್ತೇವೆಂದು ಅಭಿಪ್ರಾಯಪಟ್ಟಿತ್ತು. 

SCROLL FOR NEXT