ದೇಶ

ಮುಜಾಫರಪುರ್ ಸೆಕ್ಸ್ ಹಗರಣ: ಮಾಜಿ ಶಾಸಕ ಬ್ರಜೇಶ್ ಥಾಕೂರ್ ಗೆ ಜೀವಿತಾವಧಿ ಶಿಕ್ಷೆ

Lingaraj Badiger

ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬಿಹಾರದ ಮುಜಾಫರಪುರ್ ಶೆಲ್ಟರ್ ಹೋಮ್ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಬ್ರಜೇಶ್ ಥಾಕೂರ್ ಗೆ ಜೀವಿತಾವಧಿ ಶಿಕ್ಷೆ ವಿಧಿಸಿ ದೆಹಲಿ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಕುಲಶ್ರೆಷ್ಠ ಅವರು, ಪೋಕ್ಸೋ ಕಾಯ್ದೆ ಅಡಿ ಮತ್ತು ಸಾಮೂಹಿಕ ಅತ್ಯಾಚಾರ ಕಾಯ್ದೆ ಅಡಿ ಮಾಜಿ ಶಾಸಕ ತಪ್ಪಿತಸ್ಥ ಎಂದು ಜನವರಿ 20 ರಂದು ತೀರ್ಪು ನೀಡಿದ್ದರು. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದರು. 

ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ ಸೌರಭ್ ಕುಲಶ್ರೆಷ್ಠ ಅವರು, ಹಲವು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದ ಥಾಕೂರ್ ಗೆ ಜೀವಿತಾವಧಿ ಶಿಕ್ಷೆ ವಿಧಿಸಿದ್ದಾರೆ.

ಬಿಹಾರ ಪೀಪಲ್ಸ್ ಪಾರ್ಟಿ(ಬಿಪಿಪಿ)ಯ ಮಾಜಿ ಶಾಸಕ ಬ್ರಜೇಶ್ ಥಾಕೂರ್ ಶೆಲ್ಟರ್ ಹೋಮ್ ನಡೆಸುತ್ತಿದ್ದರು. ಥಾಕೂರ್ ನಡೆಸುತ್ತಿದ್ದ ಬಾಲಿಕ ಗೃಹದಲ್ಲಿದ್ದ ಕನಿಷ್ಠ 34 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ವೈದ್ಯಕೀಯ ವರದಿ ಖಚಿತಪಡಿಸಿತ್ತು.

ಮುಜಾಫರಪುರದ ಸರ್ಕಾರಿ ಆಶ್ರಯ ತಾಣದಲ್ಲಿದ್ದ 40 ಬಾಲಕಿಯರ ಪೈಕಿ 34 ಬಾಲಕಿಯರ ಮೇಲೆ ಅಲ್ಲಿನ ಸಿಬ್ಬಂದಿ, ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರಂತರ ಅತ್ಯಾಚಾರ ಎಸಗಿದ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸಿಬಿಐಗೆ ಒಪ್ಪಿಸಿದ್ದರು.

ಶೆಲ್ಟರ್ ಹೋಮ್ ನೋಡಿಕೊಳ್ಳುತ್ತಿದ್ದ ಥಾಕೂರ್ ಮೂರು ಸಣ್ಣ ದಿನಪತ್ರಿಕೆಗಳನ್ನು ನಡೆಸುತ್ತಿದ್ದು, ಆಡಳಿತರೂಢ ಜೆಡಿಯುಗೆ ಆಪ್ತರಾಗಿದ್ದಾರೆ. ಥಾಕೂರ್ ಸಹ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.

SCROLL FOR NEXT