ದೇಶ

'ಹಮ್ ಹೋಂಗೆ ಕಾಮ್ಯಾಬ್' ದೇಶಭಕ್ತಿ ಗೀತೆ ಹಾಡಿ ರಂಜಿಸಿದ ಅರವಿಂದ್ ಕೇಜ್ರಿವಾಲ್... 

Sumana Upadhyaya

ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅರವಿಂದ್ ಕೇಜ್ರಿವಾಲ್ 'ಹಮ್ ಹೋಂಗೆ ಕಾಮ್ಯಾಬ್' ಎಂಬ ಜನಪ್ರಿಯ ದೇಶಭಕ್ತಿ ಗೀತೆಯನ್ನು ಹಾಡುವ ಮೂಲಕ ಗಮನ ಸೆಳೆದರು.


ಅವರು ಹಾಡುತ್ತಿದ್ದಂತೆ ಅವರ ಅಭಿಮಾನಿಗಳು, ಆಪ್ ಕಾರ್ಯಕರ್ತರು ಕೂಡ ದನಿಗೂಡಿಸಿದರು. ಇಡೀ ರಾಮಲೀಲಾ ಮೈದಾನ ಹಮ್ ಹೋಂಗೆ ಕಾಮ್ಯಾಬ್ ಗೀತೆಯಲ್ಲಿ ಮೊಳಗಿತು. ಗೀತೆಯನ್ನು ಗಾಯನ ಮಾಡಿ ಮುಗಿಸಿದ ಕೇಜ್ರಿವಾಲ್ ಭಾರತ್ ಮಾತಾ ಕಿ ಜೈ ಎಂದು ಕೂಗಿದರು. ನೆರೆದಿದ್ದ ಜನಸಮೂಹ ಅದಕ್ಕೆ ಪ್ರತಿಕೂಗಿತು. 


ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ದೆಹಲಿಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಜೊತೆಗೂಡಿ ಕೆಲಸ ಮಾಡಲು ತಾವು ಬಯಸುತ್ತಿದ್ದು ರಾಜ್ಯದ ಸುಗಮ ಆಡಳಿತಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಬಯಸುತ್ತಿರುವುದಾಗಿ ಹೇಳಿದರು.


ಚುನಾವಣೆ ಮುಗಿಯುತ್ತಿದ್ದಂತೆ ರಾಜಕೀಯ ಮಾಡುವುದು ಬಿಡಬೇಕು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ವಿರೋಧ ಪಕ್ಷದವರು ಮಾಡಿರುವ ಆರೋಪಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ, ಅದಕ್ಕೆ ಕ್ಷಮೆಯಿದೆ ಎಂದರು.


ತಮ್ಮನ್ನು ದೆಹಲಿಯ ಪುತ್ರ ಎಂದು ಕರೆದುಕೊಂಡ ಅವರು, ಇದು ತಮ್ಮ ಗೆಲುವಲ್ಲ, ಬದಲಿಗೆ ದೆಹಲಿಯ ಪ್ರತಿಯೊಬ್ಬರ ಗೆಲುವು ಎಂದು ಬಣ್ಣಿಸಿದರು.ಅದು ಬಿಜೆಪಿ ಅಥವಾ ಕಾಂಗ್ರೆಸ್ ಆಗಿರಲಿ, ತಾವು ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಎಂದರು. 
ಕಳೆದ 5 ವರ್ಷಗಳಲ್ಲಿ ತಾವು ಯಾರಿಗೂ ಮಲತಾಯಿ ಧೋರಣೆ ತಳೆದಿರಲಿಲ್ಲ, ದೆಹಲಿಯ ಸರ್ವರ ಏಳಿಗೆಗೆ ಶ್ರಮಿಸಿರುವುದಾಗಿ ಹೇಳಿದರು.


ಸಿಎಂ ಪ್ರಮಾಣವಚನಕ್ಕೆ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಸಾಕ್ಷಿಯಾದರು. ಅರವಿಂದ್ ಕೇಜ್ರಿವಾಲ್ ರಂತೆ ವೇಷ ಭೂಷಣ ಧರಿಸಿ ಮೊನ್ನೆ ಫಲಿತಾಂಶ ದಿನ ಗಮನಸೆಳೆದಿದ್ದ ಲಿಟ್ಲ್ ಮಫ್ಲರ್ ಮ್ಯಾನ್ ಪುಟ್ಟ ಬಾಲಕ ಇಂದು ಸಹ ಅದೇ ರೀತಿ ವೇಷ ತೊಟ್ಟುಕೊಂಡು ಬಂದು ಕ್ಯಾಮರಾಕ್ಕೆ ಸೆರೆಯಾದನು. 

SCROLL FOR NEXT