ದೇಶ

'ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ': ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾಪವನ್ನೇ ತಿರಸ್ಕರಿಸಿದ ಭಾರತ!

Sumana Upadhyaya

ನವದೆಹಲಿ:ಕಾಶ್ಮೀರ ವಿಷಯದಲ್ಲಿ ಅಮೆರಿಕಾ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಭಾರತ ಇದೀಗ ವಿಶ್ವಸಂಸ್ಥೆಯ ಪ್ರಸ್ತಾಪವನ್ನೇ ತಳ್ಳಿಹಾಕಿದೆ.


ಕಾಶ್ಮೀರ ವಿವಾದದಲ್ಲಿ ಮಧ್ಯೆ ಪ್ರವೇಶಿಸುತ್ತೇವೆ ಎಂದು ಹೇಳಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಪ್ರಸ್ತಾವನೆಯನ್ನು ತಿರಸ್ಕರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿವಾದ ಬಗೆಹರಿಸಲು ಮಧ್ಯೆ ಪ್ರವೇಶಿಸುವ ಬದಲು ಪಾಕಿಸ್ತಾನ ಅಕ್ರಮವಾಗಿ ಬಲವಂತವಾಗಿ ಆಕ್ರಮಣ ಮಾಡಿಕೊಂಡಿರುವ ಜಾಗವನ್ನು ಬಿಟ್ಟುಕೊಡಲು ಹೇಳಿ ಎಂದಿದೆ.


ಕಾಶ್ಮೀರ ವಿವಾದದಲ್ಲಿ ಭಾರತದ ನಿಲುವು ಎಂದಿಗೂ ಬದಲಾಗುವುದಿಲ್ಲ. ಜಮ್ಮು-ಕಾಶ್ಮೀರ ಯಾವತ್ತಿದ್ದರೂ ಭಾರತದ ಅವಿಭಾಜ್ಯ ಅಂಗ. ಪಾಕಿಸ್ತಾನ ವಶಪಡಿಸಿಕೊಂಡಿರುವ ಜಮ್ಮು-ಕಾಶ್ಮೀರದ ಪ್ರದೇಶಗಳನ್ನು ಬಿಟ್ಟುಕೊಡುವುದು ಮುಖ್ಯ ವಿಷಯವಾಗಿದೆ. ಬೇರೆ ವಿಷಯಗಳನ್ನು ದ್ವಿಪಕ್ಷೀಯವಾಗಿಯೇ ಚರ್ಚಿಸೋಣ. ಇಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ರವೀಶ್ ಕುಮಾರ್ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.


ಭಾರತದ ವಿರುದ್ಧ ಗಡಿಭಾಗದಲ್ಲಿ ಮಾಡುತ್ತಿರುವ ಭಯೋತ್ಪಾದನೆ ಬೆಂಬಲಿತ ಚಟುವಟಿಕೆಗಳನ್ನು ನಿಲ್ಲಿಸಿ ಪಾಕಿಸ್ತಾನ ವಿಶ್ವಾಸಾರ್ಹತೆಯಿಂದ ನಿಖರತೆಯಿಂದ ವರ್ತಿಸಲು ವಿಶ್ವಸಂಸ್ಥೆ ಆ ದೇಶಕ್ಕೆ ಸೂಕ್ತ ಸಲಹೆ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ಪಾಕಿಸ್ತಾನದಿಂದ ಭಯೋತ್ಪಾದನೆಗೆ ಕುಮ್ಮಕ್ಕು ಸಿಕ್ಕಿ ಭಯೋತ್ಪಾದಕರ ಉಪಟಳ ಹೆಚ್ಚಾಗುತ್ತಿರುವುದರಿಂದಲೇ ಜಮ್ಮು-ಕಾಶ್ಮೀರ ಜನರ ಮೂಲಭೂತ ಜೀವನದ ಹಕ್ಕಿಗೆ ಧಕ್ಕೆಯುಂಟಾಗುತ್ತಿದೆ ಎಂದು ಸಹ ರವೀಶ್ ಕುಮಾರ್ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.


ಪಾಕಿಸ್ತಾನಕ್ಕೆ ನಾಲ್ಕು ದಿನಗಳ ಭೇಟಿಗಾಗಿ ಆಗಮಿಸಿದ್ದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳು ಪಾಕಿಸ್ತಾನ ವಿದೇಶಾಂಗ ಸಚಿವ ಮೊಹಮ್ಮೂದ್ ಖುರೇಷಿ ಅವರ ಜೊತೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜಮ್ಮು-ಕಾಶ್ಮೀರ ಮತ್ತು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಎದ್ದಿರುವ ಉದ್ವಿಗ್ನ ಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ್ದ ಗುಟೆರೆಸ್, ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯ ದೇಶಗಳ ನಡುವಿನ ಉದ್ವಿಗ್ನ ಸಂಬಂಧದ ಮಧ್ಯೆ ಮಿಲಿಟರಿ ಮತ್ತು ವಾಗ್ದಾಳಿ ಕಡಿಮೆ ಮಾಡಿ ಅತ್ಯಂತ ಹೆಚ್ಚಿನ ಸಂಯಮ ಕಾಪಾಡಬೇಕು ಎಂದಿದ್ದಾರೆ. 


ಕಳೆದ ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. 

SCROLL FOR NEXT