ದೇಶ

ಉತ್ತರ ಪ್ರದೇಶದ ಸೋನೆಭದ್ರದಲ್ಲಿ 3,000 ಟನ್ ಚಿನ್ನದ ನಿಕ್ಷೇಪ ಪತ್ತೆ

Lingaraj Badiger

ಲಖನೌ: ಉತ್ತರ ಪ್ರದೇಶದ ಸೋನೆಭದ್ರ ಜಿಲ್ಲೆಯಲ್ಲಿ ಇತ್ತೀಚೆಗೆ ಟನ್‍ ಗಟ್ಟಲೆ ಚಿನ್ನದ ನಿಕ್ಷೇಪ ಪತ್ತೆಯಾದ ನಂತರ ರಾಜ್ಯ ಸರ್ಕಾರ ನಿಕ್ಷೇಪಗಳ ಹರಾಜಿನಿಂದ ಭಾರಿ ಆದಾಯ ಪಡೆಯಲು ಸಜ್ಜಾಗಿದೆ.

ಭಾರತೀಯ ಭೂ ಸರ್ವೇಕ್ಷಣೆ ಇಲಾಖೆ ಮತ್ತು ಉತ್ತರ ಪ್ರದೇಶ ಭೂವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯದ ವರದಿಗಳ ಪ್ರಕಾರ, ಸೋನೆ ಪಹಾಡಿ ಮತ್ತು ಹಾರ್ಡಿ ಗ್ರಾಮ ಪ್ರದೇಶದಲ್ಲಿ ಸುಮಾರು 3,000 ಟನ್ ಗಳಷ್ಟು ಚಿನ್ನದ ನಿಕ್ಷೇಪವಿದೆ ಎಂದು ಹೇಳಲಾಗುತ್ತಿದೆ.

ಚಿನ್ನ ನಿಕ್ಷೇಪಗಳಿರುವ ಬ್ಲಾಕ್ ಗಳ ಹಂಚಿಕೆ ಪ್ರಕ್ರಿಯೆಯನ್ನು ಉತ್ತರ ಪ್ರದೇಶ ಸರ್ಕಾರ ಆರಂಭಿಸಿದೆ. ಕೋನ್ ಪ್ರದೇಶದ ಹಾರ್ಡಿ ಗ್ರಾಮ ಮತ್ತು ಮಹೂಲಿ ಪ್ರದೇಶದ ಸೋನೆ ಪಹಾಡಿಗಳಲ್ಲಿ ಭಾರಿ ಪ್ರಮಾಣದ ಚಿನ್ನದ ನಿಕ್ಷೇಪ ದೃಢಪಡಿಸಲಾಗಿದೆ.

ಇ-ಟೆಂಡರಿಂಗ್ ಪ್ರಕ್ರಿಯೆ ಮೂಲಕ ಈ ಬ್ಲಾಕ್ ಗಳನ್ನು ಹರಾಜು ಮಾಡಲು ಸರ್ಕಾರ ಏಳು ಸದಸ್ಯರ ತಂಡವನ್ನು ರಚಿಸಿದೆ. ಈ ತಂಡ ಇಡೀ ಪ್ರದೇಶವನ್ನು ಸಮೀಕ್ಷೆ(ಜಿಯೋ-ಟ್ಯಾಗಿಂಗ್) ನಡೆಸಿ ಅದರ ವರದಿಯನ್ನು ಶನಿವಾರದ ವೇಳೆಗೆ ಲಖನೌದ ಭೂವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯಕ್ಕೆ ಸಲ್ಲಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶ ಭೂವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯದ ಅಧಿಕೃತ ಪತ್ರದ ಪ್ರಕಾರ, 2,943.26 ಟನ್ ಚಿನ್ನ ನಿಕ್ಷೇಪ ಸೋನ್ ಪಹಾಡಿಯಲ್ಲಿದ್ದರೆ, 646.15 ಕೆಜಿ ಚಿನ್ನ ನಿಕ್ಷೇಪ ಹಾರ್ಡಿ ಬ್ಲಾಕ್‌ನಲ್ಲಿದೆ ಎಂದು ಹೇಳಲಾಗಿದೆ.

ವಿಶ್ವ ಚಿನ್ನದ ಮಂಡಳಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ 626 ಟನ್ ಚಿನ್ನದ ನಿಕ್ಷೇಪವಿದೆ. ಹೊಸ ನಿಕ್ಷೇಪ ಇದಕ್ಕಿಂತ ಐದು ಪಟ್ಟು ಹೆಚ್ಚಿದ್ದು, ಇದರ ಮೊತ್ತ ಸುಮಾರು 12 ಲಕ್ಷ ಕೋಟಿ ರೂ.ಎಂದು ಅಂದಾಜಿಸಲಾಗಿದೆ.

ಭಾರತೀಯ ಭೂಸರ್ವೇಕ್ಷಣಾ ಇಲಾಖೆ ಈ ಬಗ್ಗೆ ಸೂಚಿಸಿದ ನಂತರ 1992-93ರಲ್ಲಿ ಸೋನೆಭದ್ರದಲ್ಲಿ ಚಿನ್ನದ ನಿಕ್ಷೇಪ ಪತ್ತೆ ಮಾಡುವ ಕೆಲಸ ಆರಂಭವಾಯಿತು. ಸೋನೆಭದ್ರಾ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆ ಮಾಡುವ ಪ್ರಕ್ರಿಯೆಯನ್ನು ಬ್ರಿಟಿಷರು ಈ ಮೊದಲೇ ಆರಂಭಿಸಿದ್ದರು ಎಂದು ವರದಿಯಾಗಿದೆ.

ಈ ನಿಟ್ಟಿನಲ್ಲಿ ಭಾರತೀಯ ಭೂಸರ್ವೇಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿ 2011ರಲ್ಲಿ ನಿವೃತ್ತರಾಗಿರುವ ಡಾ.ಪೃಥ್ವಿ ಮಿಶ್ರಾ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರದೇಶದ ಚಿನ್ನದ ನಿಕ್ಷೇಪವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಚಿನ್ನದಿಂದ ಕೂಡಿದ ಬಂಡೆಯಿದ್ದು, ಇದು ಸುಮಾರು ಒಂದು ಕಿ.ಮೀ ಉದ್ದ, 18 ಮೀಟರ್ ಎತ್ತರ ಮತ್ತು 15 ಮೀಟರ್ ಅಗಲವಿದೆ ಎಂದು ಡಾ. ಮಿಶ್ರಾ ಅವರು ನಿವೃತ್ತಿಯ ಸಮಯದಲ್ಲಿ ಮಾಹಿತಿಯನ್ನು ಬಹಿರಂಗಪಡಿಸಿದ್ದರು.

SCROLL FOR NEXT