ದೇಶ

ಜಮ್ಮು-ಕಾಶ್ಮೀರ: ಬಾರಮುಲ್ಲಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಸೆರೆ, ಶಸ್ತ್ರಾಸ್ತ್ರಗಳ ವಶ

Nagaraja AB

ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ  ಜಮ್ಮು- ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ತಾಪ್ಪರ್ ಪಠಾಣ್ ಗ್ರಾಮದಲ್ಲಿ ಅನೇಕ ಉಗ್ರ ಸಂಬಂಧಿತ ಘಟನೆಗಳಲ್ಲಿ ಬೇಕಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಜುನೈದ್ ಫಾರೂಕ್ ಪಂಡಿತ್ ನನ್ನು ಭದ್ರತಾ ಪಡೆಗಳು ಇಂದು ಬಂಧಿಸಿದ್ದಾರೆ.

ಜಮ್ಮು- ಕಾಶ್ಮೀರ ಪೊಲೀಸರು, ಸೇನೆ ಹಾಗೂ ಸಿಆರ್ ಪಿಎಫ್ ಯೋಧರು ಜಂಟಿ ಕಾರ್ಯಾಚರಣೆ ನಡೆಸಿ ಈ ಉಗ್ರನನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ತಾಪ್ಪರ್ ಪಠಾಣ್ ನಲ್ಲಿ ಉಗ್ರ ಜುನೈದ್ ಫಾರೂಖ್ ಪಂಡಿತ್ ನನ್ನು ಬಂಧಿಸಲಾಗಿದ್ದು, ಆತನಿಂದ ಒಂದು ಚೀನಾದ ಪಿಸ್ತೂಲ್, 13 ಜೀವಂತ ಮದ್ದುಗುಂಡುಗಳು ಹಾಗೂ 2 ಮ್ಯಾಗಜೀನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ಮುಂದುವರೆದಿದೆ ಎಂದು ಬಾರಮುಲ್ಲಾ ಡಿಐಜಿ ಎಂ. ಸುಲೇಮನ್ ಮಾಹಿತಿ ನೀಡಿದ್ದಾರೆ.

ಎನ್ ಕೌಂಟರ್ ನಲ್ಲಿ ಎಲ್ ಇಟಿ ಉಗ್ರರಾದ ನವೀದ್ ಅಹ್ಮದ್ ಭಟ್ ಹಾಗೂ ಆಕಿಬ್ ಯಾಸೀನ್ ಭಟ್ ಹತ್ಯೆಯಾದ ಬೆನ್ನಲ್ಲೇ  ಜುನೈದ್ ಫಾರೂಕ್ ಪಂಡಿತ್ ನನ್ನು ಬಂಧಿಸಲಾಗಿದೆ. 

ಅನೇಕ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ನವೀದ್ ಅಹ್ಮದ್ ಭಟ್ ಮತ್ತು ಆಕಿಬ್ ಯಾಸೀನ್ ಭಟ್ ಅವರನ್ನು ಕಳೆದ ರಾತ್ರಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಜಮ್ಮು -ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. 

ಈ ವರ್ಷದಲ್ಲಿ 12 ಯಶಸ್ವಿ ಕಾರ್ಯಾಚರಣೆಯಲ್ಲಿ 25 ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಾಶ್ಮೀರದಲ್ಲಿ 9 ಜಮ್ಮುವಿನಲ್ಲಿ  3-4 ಭಯೋತ್ಪಾದಕ ಕಾರ್ಯಕರ್ತರನ್ನು ಜಮ್ಮು ಪ್ರದೇಶದಲ್ಲಿ ಬಂಧಿಸಲಾಗಿದೆ. 40ಕ್ಕೂ ಹೆಚ್ಚು ಸ್ಥಳೀಯ ಮಟ್ಟದಲ್ಲಿ ಉಗ್ರರ ಪರ ಕೆಲಸ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ ಎಂದು ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

SCROLL FOR NEXT