ದೇಶ

ನವದೆಹಲಿ: ಭರವಸೆ ನಂತರ ಭಾಗಶಃ ರಸ್ತೆ ತೆರವುಗೊಳಿಸಿದ ಶಾಹೀನ್ ಬಾಗ್ ಪ್ರತಿಭಟನಾಕಾರರು 

Nagaraja AB

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಎರಡು ತಿಂಗಳಿಗೂ ಹೆಚ್ಚು ದಿನದಿಂದಲೂ ಬಂದ್ ಮಾಡಲಾಗಿದ್ದ ಕಲಿಂದಿ ಕುಂಜ್ ಮತ್ತು ನೊಯ್ಡಾ ನಡುವಣ ಮಾರ್ಗವನ್ನು ಇಂದು ತೆರವುಗೊಳಿಸಲಾಗಿದೆ.

ಪ್ರತಿಭಟನಾಕಾರರ ಬೇಡಿಕೆಯನ್ನು ಸುಪ್ರೀಂಕೋರ್ಟ್ ಮುಂದೆ ತರುವುದಾಗಿ ಸುಪ್ರೀಂಕೋರ್ಟ್ ಮಧ್ಯಸ್ಥಿಕೆಗೆ  ನೇಮಿಸಿರುವ ಸಾಧನಾ ರಾಮಚಂದ್ರನ್  ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಈ ಮಾರ್ಗವನ್ನು ತೆರವುಗೊಳಿಸಿದ್ದಾರೆ.

ಇಂದು ಬೆಳಗ್ಗೆ ಶಾಹೀನ್ ಬಾಗ್ ಗೆ ಅಚ್ಚರಿ ರೀತಿಯಲ್ಲಿ ಭೇಟಿ ನೀಡಿದ ರಾಮಚಂದ್ರನ್, ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರಾಮಚಂದ್ರನ್, ಒಂದು ವೇಳೆ ರಸ್ತೆಯನ್ನು ತೆರವುಗೊಳಿಸದಿದ್ದರೆ ಏನನ್ನು ಸಹಾಯ ಮಾಡಲು ಸಾಧ್ಯವಿಲ್ಲ. ಶಾಹೀನ್ ಬಾಗ್ ನ್ನು ಧ್ವಂಸಗೊಳಿಸಲಾಗಿದೆ ಎಂದು ನಾವು ಹೇಳಿಲ್ಲ ಎಂದು ಹೇಳಿದರು.

ಜಾಮಿಯಾ ಮತ್ತು ಶಾಹೀನ್ ಬಾಗ್ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ರಾಮಚಂದ್ರನ್ ಅವರನ್ನು ಒತ್ತಾಯಿಸಿದ ಪ್ರತಿಭಟನಾಕಾರರು,  ತಮ್ಮ ಭದ್ರತೆಗೆ ಸುಪ್ರೀಂಕೋರ್ಟ್ ಏನನ್ನಾದರೂ ನಿರ್ದೇಶನ ನೀಡಿದ್ದೀಯಾ ಎಂದು ಕೇಳಿದರು. 

ಉದ್ದೇಶಿತ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಅನುಷ್ಠಾನಗೊಳಿಸಬಾರದು, ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಪ್ರತಿಭಟನಾಕಾರರಿಗೆ ಭದ್ರತೆ ನೀಡಬೇಕು, ಪ್ರತಿಭಟನೆ ವೇಳೆಯಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಕುಟುಂಬ ಸದಸ್ಯರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾಕಾರರ ನಡುವಿನ ಸಭೆ ಕುರಿತಂತೆ ಮಧ್ಯಸ್ಥಿಕೆಗಾಗಿ ಸುಪ್ರೀಂಕೋರ್ಟ್ ನೇಮಿಸಿರುವ ಮತ್ತೋರ್ವ ನ್ಯಾಯಾಧೀಶ ಸಂಜಯ್ ಹೆಗ್ಡೆ ಅವರೊಂದಿಗೆ ಮಾತ ನಾಡುವುದಾಗಿ ರಾಮಚಂದ್ರನ್ ತಿಳಿಸಿದ ರಾಮಚಂದ್ರನ್, ಎರಡು ತಿಂಗಳಿಗೂ ಹೆಚ್ಚು ದಿನಗಳಿಂದಲೂ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಅನೇಕ ಜನರಿಗೆ ತೊಂದರೆಯಾಗಿರುವುದಾಗಿ ಹೇಳಿದರು. 

ಆಗ್ನೇಯ ಡಿಸಿಪಿ ಆರ್. ಪಿ. ಮೀನಾ ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಪರಾಮರ್ಶಿಸಿದರು. ಆದಾಗ್ಯೂ, ಭಾಗಶ: ರಸ್ತೆಗೆ ಬ್ಯಾರಿಕೇಡ್ ಹಾಕುವ ಮೂಲಕ ಈ ಮಾರ್ಗದ ಮೂಲಕ ಸಾಗುವ ಪ್ರತಿಯೊಂದು ಕಾರನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಶಾಹೀನ್ ಭಾಗ್ ನಲ್ಲಿ ಪ್ರತಿಭಟನೆ ಮುಂದುವರೆದಿದ್ದರಿಂದ ಈ ಮಾರ್ಗವನ್ನು ಬಂದ್ ಮಾಡಲಾಗಿತ್ತು. ಶಾಹೀನ್ ಬಾಗ್ ಪ್ರತಿಭಟನಾಕಾರರ ನಡುವಿನ ಮಧ್ಯಸ್ಥಿಕೆಗಾಗಿ  ನ್ಯಾಯಾಧೀಶರನ್ನು ಸುಪ್ರೀಂಕೋರ್ಟ್ ನೇಮಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. 

SCROLL FOR NEXT