ದೇಶ

ಗ್ಯಾಂಗ್ ರೇಪ್ ಪ್ರಕರಣ: ಉತ್ತರ ಪ್ರದೇಶ ಬಿಜೆಪಿ ಶಾಸಕ, ಇತರೆ ಐವರಿಗೆ ಕ್ಲೀನ್ ಚಿಟ್, ಸಂಬಂಧಿ ಬಂಧನ

Lingaraj Badiger

ಲಖನೌ: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಭಧೋಯ್ ಕ್ಷೇತ್ರದ ಬಿಜೆಪಿ ಶಾಸಕ ರವೀಂದ್ರ ನಾಥ್ ತ್ರಿಪಾಠಿ ಹಾಗೂ ಇತರೆ ಐವರಿಗೆ ಉತ್ತರ ಪ್ರದೇಶ ಪೊಲೀಸರು ಕ್ಲೀನ್ ಚಿಟ್ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸಂಬಂಧಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಾಸಕ ತ್ರಿಪಾಠಿ ಹಾಗೂ ಆರು ಮಂದಿಯ ವಿರುದ್ಧ ಕಳೆದ ಬುಧವಾರ ಎಫ್ಐಆರ್ ದಾಖಲಿಸಲಾಗಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಭದೋಯಿ ಪೊಲೀಸರು ಶಾಸಕರು ಹಾಗೂ ಇತರೆ ಐವರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕನ ಸೋದರಳಿಯನನ್ನು ಬಂಧಿಸಲಾಗಿದೆ.

ತನಿಖೆಯ ವೇಳೆ ಶಾಸಕರ ಹಾಗೂ ಇತರೆ ಐವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಹೀಗಾಗಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ಭದೋಯಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಬದನ್ ಸಿಂಗ್ ಅವರು ತಿಳಿಸಿದ್ದಾರೆ.

ಅತ್ಯಾಚಾರ ಆರೋಪದ ಮೇಲೆ ತ್ರಿಪಾಠಿ ಅವರ ಸಂಬಂಧಿ ಸಂದೀಪ್ ತಿವಾರಿ ಅವರನ್ನು ಬಂಧಿಸಲಾಗಿದೆ. ಮಹಿಳೆಯನ್ನು ನಿಂದಿಸಿ, ಹಲ್ಲೆ ನಡೆಸಿದ ಆರೋಪದ ಶಾಸಕರ ಕುಟುಂಬದ ಮತ್ತೊಬ್ಬ ಸದಸ್ಯ ನೀತೇಶ್ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಶಾಸಕರ ವಿರುದ್ಧ ಮಹಿಳೆ ದೂರು ದಾಖಲಿಸಿದ ನಂತರ ಪ್ರಕರಣದ ತನಿಖೆಗಾಗಿ ಇಬ್ಬರು ಸದಸ್ಯರ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಯಾವುದೇ ಸಾಕ್ಷ್ಯಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದೆ ಎಂದು ರಾಮ್ ಬದನ್ ಸಿಂಗ್ ತಿಳಿಸಿದ್ದಾರೆ.

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಹಾಗೂ ಆತನ ಕುಟುಂಬಸ್ಥರು ತಮ್ಮ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಮಹಿಳೆ ಆರೋಪಿಸಿದ್ದರು. ಈ ಸಂಬಂಧ ಇದೇ ಫೆಬ್ರವರಿ 10ರಂದು ಮಹಿಳೆ ಉತ್ತರ ಪ್ರದೇಶ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಮಹಿಳೆ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.

SCROLL FOR NEXT