ದೇಶ

ದೆಹಲಿ ಹಿಂಸಾಚಾರ ನಿಯಂತ್ರಣಕ್ಕೆ ಬೇಕಾದ ಎಲ್ಲ ನೆರವು ನೀಡುತ್ತೇವೆ: ಸಿಎಂ ಕೇಜ್ರಿವಾಲ್ ಗೆ ಅಮಿತ್ ಶಾ ಅಭಯ

Srinivasamurthy VN

ನವದೆಹಲಿ: ಪೌರತ್ವ ತಿದ್ದು ಕಾಯ್ದೆ ವಿಚಾರವಾಗಿ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಇಂದು ಅಮಿತ್ ಶಾ ನೇತೃತ್ವದಲ್ಲಿ ಗೃಹ ಇಲಾಖೆಯ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಇಂದು ದೆಹಲಿಯ ಗೃಹ ಸಚಿವಾಲಯದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಕರೆಯಲಾಗಿತ್ತು. ಸಭೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ದೆಹಲಿ ಸರ್ಕಾರದ ಹಲವು ಉನ್ನತ ಮಟ್ಟದ ಅಧಿಕಾರಿಗಳು, ಕೇಂದ್ರ ಗೃಹ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಅಲ್ಲದೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಪೊಲೀಸ್ ಆಯುಕ್ತ ಅಮುಲ್ಯ ಪಟ್ನಾಯಕ್, ಕಾಂಗ್ರೆಸ್ ಮುಖಂಡ ಸುಭಾಷ್ ಚೋಪ್ರಾ, ಬಿಜೆಪಿ ಮುಖಂಡರಾದ ಮನೋಜ್ ತಿವಾರಿ ಮತ್ತು ರಂಬೀರ್ ಸಿಂಗ್ ಬಿಧುರಿ ಮತ್ತು ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ದ್ವೇಷ-ಪ್ರಚಾರ, ಪೊಲೀಸ್-ಶಾಸಕರ ಸಮನ್ವಯತೆ, ಭದ್ರತಾ ಪಡೆಗಳ ನಿಯೋಜನೆ ಮತ್ತು ವದಂತಿಗಳನ್ನು ನಿಯಂತ್ರಿಸುವ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ದೆಹಲಿ ಹಿಂಸಾಚಾರದ ಕುರಿತ ವರದಿ ನೀಡಿದ್ದು, ಕೈಗೊಂಡ ಭದ್ರತೆ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ ಭದ್ರತಾ ಪಡೆಗಳ ಕೊರತೆ ಮತ್ತು ತುರ್ತು ನಿರ್ಧಾರ ಕೈಗೊಳ್ಳುವಲ್ಲಿನ ತಾಂತ್ರಿಕ ತೊಡಕುಗಳ ಕುರಿತೂ ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಬಳಿಕ ಮಾತನಾಡಿದ ಅಮಿತ್ ಶಾ ಅವರು, ಹಿಂಸಾಚಾರ ನಿಯಂತ್ರಣಕ್ಕೆ ಬೇಕಾದ ಎಲ್ಲ ನೆರವನ್ನೂ ಕೇಂದ್ರ ಸರ್ಕಾರ ದೆಹಲಿ ಸರ್ಕಾರಕ್ಕೆ ನೀಡುತ್ತದೆ. ಅಗತ್ಯ ಬಿದ್ದರು ಹೆಚ್ಚುವರಿ ಪೊಲೀಸರನ್ನು ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಹಿಂಸಾಚಾರ ಹೆಚ್ಚಲು ಬಿಡುವುದಿಲ್ಲ. ಈ ಸಂಬಂಧ ಗೃಹ ಇಲಾಖೆಯ ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಹಿಂಸಾಚಾರ ನಿಯಂತ್ರಿಸುವ ಸಲುವಾಗಿ ಕೈಗೊಳ್ಳಬೇಕಾದ ಎಲ್ಲ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

SCROLL FOR NEXT