ದೇಶ

ದೆಹಲಿಯಲ್ಲಿ ಹಿಂಸಾಚಾರ: ಸಾವಿನ ಸಂಖ್ಯೆ 10ಕ್ಕೆ ಏರಿಕೆ; ಇದು ಭಾರತದ ಆಂತರಿಕ ವಿಚಾರ ಎಂದ ಟ್ರಂಪ್

Lingaraj Badiger

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಮಂಗಳವಾರ ಟಿವಿ ವಾಹಿನಿಯ ವರಿದಾರರ ಮೇಲೂ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 

ಈ ಕುರಿತಂತೆ ಜಿಟಿಬಿ ಆಸ್ಪತ್ರೆಯ ವೈದ್ಯಾಧಿಕಾರಿ ಸುನಿಲ್ ಕುಮಾರ್ ಅವರು ಮಾಹಿತಿ ನೀಡಿದ್ದು, ಹಿಂಸಾಚಾರದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದವರ ಪೈಕಿ ಇಂದು ನಾಲ್ಕು ಮಂದಿ ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಆ ಮೂಲಕ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿಕೆಯಾದಂತಾಗಿದೆ.

ಈಶಾನ್ಯ ದೆಹಲಿಯ ಮೌಜ್‌ಪುರ ಮತ್ತು ಬ್ರಹ್ಮಪುರಿ ಪ್ರದೇಶದಲ್ಲಿ ಇಂದು ಮತ್ತೆ ಕಲ್ಲು ತೂರಾಟದ  ಘಟನೆಗಳು ವರದಿಯಾಗಿದ್ದು, ಪತ್ರಕರ್ತರು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
   
ರಾಷ್ಟ್ರ ರಾಜಧಾನಿಯ ಜಾಫ್ರಾಬಾದ್ ಮತ್ತು ಮೌಜ್‌ಪುರದಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆ ವೇಳೆ ನಡೆದ ಘರ್ಷಣೆಗಳಲ್ಲಿ  ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಮೃತಪಟ್ಟಿದ್ದು, ಉಪ ಪೊಲೀಸ್ ಆಯುಕ್ತರು ಗಾಯಗೊಂಡಿದ್ದರು.
   
ಸಿಎಎ ಪರ ಮತ್ತು  ವಿರೋಧಿ ಪ್ರತಿಭಟನಾಕಾರರ ಉದ್ರಿಕ್ತ ಗುಂಪುಗಳು ಮನೆಗಳು, ಅಂಗಡಿಗಳು ಮತ್ತು ವಾಹನಗಳನ್ನು ಸುಟ್ಟುಹಾಕಿದ್ದಾರೆ. ಚಾಂದ್ ಬಾಗ್ ಮತ್ತು ಭಜನ್‌ಪುರದಲ್ಲಿ ಪರಸ್ಪರ ಕಲ್ಲು ತೂರಾಟ ನಡೆದಿದೆ.
   
ಉದ್ರಿಕ್ತ ಪ್ರತಿಭಟನಾಕಾರರನ್ನು ಚುದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಲಾಠಿಪ್ರಹಾರ ನಡೆಸಿದ್ದಾರೆ.
   
ಹಿಂಸಾಚಾರ ತಲೆದೋರಿರುವ ಪ್ರದೇಶಗಳಲ್ಲಿ ನಾಲ್ಕು ಅಥವಾ ಹೆಚ್ಚಿನ ಜನರು ಗುಂಪುಗೂಡುವುದನ್ನು ನಿಷೇಧಿಸಿ, ಸಿಆರ್‌ಪಿಸಿಯ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಹೇರಲಾಗಿದೆ.
   
ಮೌಜ್‌ಪುರದಲ್ಲಿ ಭಾರಿ ಕಲ್ಲು ತೂರಾಟ ನಡೆದಿದ್ದರೆ, ಜಾಫ್ರಾಬಾದ್‌ನಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
   
ಪ್ರತಿಭಟನಾಕಾರರು ಮೌಜ್‌ಪುರ ಮತ್ತು ಭಜನ್‌ಪುರದಲ್ಲಿ ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ.
  
ಈ ಮಧ್ಯೆ, ಈಶಾನ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಐದು ಮೆಟ್ರೋ ನಿಲ್ದಾಣಗಳನ್ನು ದೆಹಲಿ ಮೆಟ್ರೋ ನಿಗಮ ಬಂದ್ ಮಾಡಿದೆ.

ಹಿಂಸಾಚಾರ ಭಾರತದ ಆಂತರಿಕ ವಿಚಾರ: ಟ್ರಂಪ್
ಇನ್ನು ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೆಹಲಿ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚಿಸಿದ್ದೇವೆ. ಜನರ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಮೋದಿ ತುಂಬಾ ಶ್ರಮಿಸುತ್ತಿದ್ದಾರೆ. ಕೆಲವು ವ್ಯಕ್ತಿಗಳ ಮೇಲೆ ದಾಳಿ ನಡೆದಿದೆ ಎಂಬುದು ನನ್ನ ಗಮನಕ್ಕೆ ಬಂತು. ಆದರೆ ಈ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ. ಇದು ಭಾರತದ ಆಂತರಿಕ ವಿಚಾರ ಎಂದರು.

SCROLL FOR NEXT