ದೇಶ

ಹೋಗಿ ದೆಹಲಿ ಪರಿಸ್ಥಿತಿ ನಿಯಂತ್ರಿಸಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿಗೆ ಓವೈಸಿ ಆಗ್ರಹ

Lingaraj Badiger

ಹೈದರಾಬಾದ್: ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಮದಲು ಹೋಗಿ ದೆಹಲಿ ಪರಿಸ್ಥಿತಿ ನಿಯಂತ್ರಿಸಿ ಎಂದು ಆಗ್ರಹಿಸಿದ್ದಾರೆ.

ಕಿಶನ್ ರೆಡ್ಡಿ ಅವರು ಹೈದರಾಬಾದ್ ನಲ್ಲಿ ಏನು ಮಾಡುತ್ತಿದ್ದಾರೆ? ದೆಹಲಿಗೆ ವಾಪಸ್ ಹೋಗಿ. ದೆಹಲಿ ಪರಿಸ್ಥಿತಿ ನಿಯಂತ್ರಿಸಿ. ಅವರು ಬೇಕಾದರೆ ಗುಂಡು ಹಾರಿಸಲಿ. ಈಗಾಗಲೇ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಓವೈಸಿ ಹೇಳಿದ್ದಾರೆ.

ದೆಹಲಿ ಪೊಲೀಸರು ದಂಗೆಕೋರರ ಪರವಾಗಿದ್ದಾರೆ ಎಂಬ ಒವೈಸಿ ಹೇಳಿಕೆಗೆ ನಿನ್ನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕಿಶನ್ ರೆಡ್ಡಿ ಅವರು, ಅವರ ಹೇಳಿಕೆ ಬೇಜವಾಬ್ದಾರಿತನದ್ದು ಮತ್ತು ಅವರು ಈ ಹಿಂದೆಯೂ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದಿದ್ದರು.

ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಈಗಾಗಲೇ ಏಳು ಮಂದಿ ಮೃತಪಟ್ಟಿದ್ದಾರೆ ಮತ್ತು 100ಕ್ಕೂ ಮಂದಿ ಗಾಯಗೊಂಡಿದ್ದಾರೆ. ಇದನ್ನು ಕೋಮುಗಲಭೆ ಎಂದು ಕರೆಯಲು ಸಾಧ್ಯವಿಲ್ಲ. 'ಈ ಹಿಂಸಾಚಾರ ಓರ್ವ ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕನಿಂದಾಗಿ ನಡೆಯುತ್ತಿದೆ. ಪೊಲೀಸರು ಇದಕ್ಕೆ ಕೈಜೋಡಿಸಿದ್ದಾರೆ ಎಂಬುವುದು ಸ್ಪಷ್ಟ. ಹೀಗಾಗಿ ಈ ಕೂಡಲೇ ಮಾಜಿ ಶಾಸಕನನ್ನು ಬಂಧಿಸಬೇಕು ಹಾಗೂ ಹಿಂಸಾಚಾರ ತಡೆಯುವ ಕ್ರಮ ಕೈಗೊಳ್ಳಬೇಕು ಎಂದು ಓವೈಸಿ ಒತ್ತಾಯಿಸಿದ್ದಾರೆ.

SCROLL FOR NEXT