ದೇಶ

ಶೀಘ್ರದಲ್ಲಿಯೇ ಕಾನೂನು ಬದ್ಧ ಸಿಗರೇಟ್ ಸೇವನೆ ವಯಸ್ಸಿನ ಮಿತಿ 18ರಿಂದ 21ಕ್ಕೆ ಏರಿಕೆ- ಆರೋಗ್ಯ ಸಚಿವಾಲಯ

Nagaraja AB

ನವದೆಹಲಿ: ಕಾನೂನು ಬದ್ಧ ಸಿಗರೇಟ್ ಸೇವನೆ ವಯಸ್ಸಿನ ಮಿತಿಯನ್ನು ಪ್ರಸ್ತುತ ಈಗಿರುವ 18ರಿಂದ 21 ವರ್ಷಕ್ಕೆ ಹೆಚ್ಚಿಸಲು ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ ನಡೆಸಿದೆ.

ಪ್ರಸ್ತುತ ದೇಶದಲ್ಲಿ 18 ವರ್ಷ ತುಂಬಿದವರು ಕಾನೂನು ಪ್ರಕಾರ ಸಿಗರೇಟ್ ಸೇದಬಹುದಾಗಿದೆ. 21 ವರ್ಷ ತುಂಬಿದವರಿಗೆ ಮಾತ್ರ ಸಿಗರೇಟ್ ಸೇವನೆಗೆ ಅವಕಾಶ ನೀಡುವಂತಹ ಕಾನೂನು ರೂಪಿಸಲು ಸಚಿವಾಲಯ ಪ್ರಸ್ತಾಪಿಸಿದೆ. 

ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆಯಡಿಯಲ್ಲಿ ಇದನ್ನು ಮಾಡಲಾಗುತ್ತಿದೆ. ದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು  ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. 

ಈ ಸಂಬಂಧ ಸೂಕ್ತ ತಿದ್ದುಪಡಿ ರೂಪಿಸಲು ಹಿರಿಯ ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವಾಲಯ ಹಲವು ಸುತ್ತಿನ ಸಭೆಗಳನ್ನು ನಡೆಸಿದೆ. ತಂಬಾಕು ನಿಯಂತ್ರಣಕ್ಕಾಗಿ ತಿದ್ದುಪಡಿ ರೂಪಿಸಲು ಕಾನೂನು ಉಪ ಸಮಿತಿಯೊಂದನ್ನು ರಚಿಸಲಾಗಿದೆ. ಸಚಿವಾಲಯಕ್ಕೆ ನಮ್ಮ ಶಿಫಾರಸ್ಸುಗಳನ್ನು ಸಲ್ಲಿಸಲಾಗುವುದು ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾನೂನು ಬದ್ಧ ಸಿಗರೇಟ್ ಸೇವನೆ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಏರಿಸುವುದರ ಜೊತೆಗೆ  ನಿಯಮ ಉಲ್ಲಂಘಿಸುವವರಿಗೆ ದಂಡದ ಮೊತ್ತವನ್ನು ಏರಿಸಲು ಶಿಫಾರಸು ಮಾಡಲಾಗುವುದು, ಇದರಿಂದಾಗಿ ಯುವ ಜನಾಂಗ ಸಿಗರೇಟ್ ಅಭ್ಯಾಸಕ್ಕೆ ಅಂಟಿಕೊಳ್ಳುವುದು ಕಡಿಮೆಯಾಗಲಿದೆ. ಅಲ್ಲದೇ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಂಗಡಿಗಳಿಗೆ ತುಂಬಾಕು ಉತ್ಪನ್ನ ತರಲು ಪೋಷಕರು ಕಳುಹಿಸಬಾರದು ಎಂದು ಅವರು ಹೇಳಿದ್ದಾರೆ.

ಸಿಗರೇಟ್ ಸೇವನೆ ಕಾನೂನು ಬದ್ಧ ವಯಸ್ಸಿನ ಮಿತಿಯನ್ನು 18ರಿಂದ 21ಕ್ಕೆ ಏರಿಸುವುದು ಉತ್ತಮ ಹೆಜ್ಜೆಯಾಗಿದೆ. 2009ರ ಜಾಗತಿಕ ತುಂಬಾಕು ಸೇವಿಸುವ ಯುವಜನಾಂಗ ಸಮೀಕ್ಷೆ ಪ್ರಕಾರ  ಭಾರತದಲ್ಲಿ ಶೇ. 14. 6 ರಷ್ಟು 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ತಂಬಾಕು ಸೇವಿಸುತ್ತಿದ್ದಾರೆ. ಈ ಪೈಕಿ ಶೇ, 19 ರಷ್ಟು ಹುಡುಗರು ಹಾಗೂ ಶೇ, 8.3 ರಷ್ಟು ಹುಡುಗಿಯರು ಸಿಗರೇಟ್ ಸೇದುತ್ತಿದ್ದಾರೆ ಎಂದು ದೆಹಲಿ ಸರ್ಕಾರದ ಆರೋಗ್ಯ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ.ಎಸ್. ಕೆ. ಅರೋರಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

SCROLL FOR NEXT