ದೇಶ

ಗಲಭೆಯಲ್ಲಿ ಹೊರಗಿನವರು ಭಾಗಿ, ಹುತಾತ್ಮ ಪೊಲೀಸ್ ಪೇದೆಗೆ 1 ಕೋಟಿ ಪರಿಹಾರ: ದೆಹಲಿ ಸಿಎಂ ಕೇಜ್ರಿವಾಲ್

Lingaraj Badiger

ನವದೆಹಲಿ: 23 ಮಂದಿಯನ್ನು ಬಲಿ ಪಡೆದು ದೆಹಲಿ ಗಲಭೆಯಲ್ಲಿ ಹೊರಗಿನವರು ಭಾಗಿಯಾಗಿದ್ದಾರೆ. ಇದರಲ್ಲಿ ದೆಹಲಿಯ ಸಾಮಾನ್ಯ ಜನರ ಪಾತ್ರ ಇಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ವಿಧಾನಸಭೆಗೆ ತಿಳಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ಹೊರಗಿನಿಂದ ಬಂದ ದುಷ್ಕರ್ಮಿಗಳು ದೆಹಲಿಯಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಸಹಜ ಸ್ಥಿತಿ ಮರಳಲು ಸೇನೆ ನಿಯೋಜಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ.

ದೆಹಲಿಯ ಜನ ಶಾಂತಿಯ ಜೀವನ ಬಯಸುತ್ತಿದ್ದಾರೆ. ಇಲ್ಲಿ ಎಲ್ಲರಿಗೂ ಶಾಂತಿ ಬೇಕಾಗಿದೆ. ಗಲಭೆ ಯಾರಿಗೂ ಬೇಕಾಗಿಲ್ಲ.  ದೆಹಲಿಯ ಹೊರಗಡೆಯವರು ಮತ್ತು ಕೆಲ ರಾಜಕೀಯ ಪಕ್ಷಗಳೇ ಈ ಗಲಭೆಗೆ ಕಾರಣ ಎಂದು ಆರೋಪಿಸಿದ್ದಾರೆ.

ಇದೇ ವೇಳೆ, ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಮುಖ್ಯ ಪೊಲೀಸ್ ಪೇದೆ ರತನ್ ಲಾಲ್ ಅವರಿಗೆ ದೆಹಲಿ ಸರ್ಕಾರ 1 ಕೋಟಿ ರೂಪಾಯಿ ಪರಿಹಾರ ನೀಡಲಿದೆ ಎಂದು ಕೇಜ್ರಿವಾಲ್ ಘೋಷಿಸಿದರು.

ದೆಹಲಿ ಸರ್ಕಾರದ ನೀತಿಯಂತೆ ನಾವು ಹುತಾತ್ಮ ಮುಖ್ಯ ಪೊಲೀಸ್ ಪೇದೆಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡುತ್ತೇವೆ ಎಂದರು.

ಈ ಮಧ್ಯೆ, ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಪರ ಮತ್ತು ವಿರೋಧದ ಹಿಂಸಾಚಾರ ಮತ್ತು ಗಲಭೆಯಿಂದ ಮೃತಪಟ್ಟವರ ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

SCROLL FOR NEXT