ದೇಶ

ದೆಹಲಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ: ಅಜಿತ್ ಧೋವಲ್

Srinivasamurthy VN

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವಿನ ಸಂಘರ್ಷ ತಾರಕಕ್ಕೇರಿ ಹಿಂಸಾಚಾರ ಸಂಭವಿಸಿದ್ದ ದೆಹಲಿಯಲ್ಲಿ ಇದೀಗ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹೇಳಿದ್ದಾರೆ.

ಗಲಭೆ ಪೀಡಿತ ದೆಹಲಿಯ ವಿವಿಧ ಪ್ರದೇಶಗಳಿಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದ ಅಜಿತ್ ಧೋವಲ್ ಅವರು, ಈಶಾನ್ಯ ದೆಹಲಿಯ ಸೀಲಂಪುರ, ಮೌಜ್ಪುರಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಭದ್ರತಾ ಅಧಿಕಾರಿಗಳೊಂದಿಗೆ ಚುಟುಕು ಸಭೆ ನಡೆಸಿದ ಧೋವಲ್, ಅಗತ್ಯ ಬಿದ್ದರೆ ಕಠಿಣ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಧೋವಲ್, ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಪ್ರಸ್ತುತ ಪರಿಸ್ಥಿತಿ ಹತೋಟಿಯಲ್ಲಿದೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಪೊಲೀಸರು ಅವರ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ದೆಹಲಿ ಜನ ಈಗ ನಿರಾಳರಾಗಿದ್ದು, ಜನತೆ ಭಯ ಪಡುವ ಅಗತ್ಯವಿಲ್ಲ. ಭದ್ರತಾ ಪಡೆಗಳ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಮತ್ತೆ ಹಿಂಸಾಚಾರಕ್ಕೆ ಅವರು ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಅವರು ಸೀಲಾಂಪುರದ ಡಿಸಿಪಿಯೊಂದಿಗೆ ಸಭೆ ನಡೆಸಿದರು. ಇದಕ್ಕೂ 11 ಗಂಟೆಗಳ ಮೊದಲು ಅವರು ಈ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದರು.  ಈ ನಡುವೆ ದೆಹಲಿ ಪೊಲೀಸರು, ಸಂತ್ರಸ್ತರ ನೆರವಿಗೆ ಸಹಾಯವಾಣಿಗಳನ್ನು ಬಿಡುಗಡೆಗೊಳಿಸಿದೆ. 

ಇನ್ನು ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಣದ ಹೊಣೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ನೀಡಿತ್ತು. ಅದರಂತೆ ನಿನ್ನೆ ರಾತ್ರಿಯಿಂದಲೇ ಕಾರ್ಯಾಚರಣೆಗೆ ಇಳಿದಿದ್ದ ಧೋವಲ್, ಹಿಂಸಾಚಾರ ಪೀಡಿತ ಈಶಾನ್ಯ ದೆಹಲಿಯ ಜಫ್ರಾಬಾದ್, ಸೀಲಂಪುರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ವೇಳೆ ವಿವಿಧ ಸಮುದಾಯಗಳ ನಾಯಕರ ಭೇಟಿ ಮಾಡಿ ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದರು.

ಅಂತೆಯೇ ಇದೇ ವೇಳೆ ದೆಹಲಿ ಪೊಲೀಸ್ ವರಿಷ್ಢಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದ ಧೋವಲ್, ಹಿಂಸಾಚಾರ ನಿಯಂತ್ರಣಕ್ಕೆ ಬೇಕಾದ ಯಾವುದೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಿ. ಕಾನುನು ಮತ್ತು ಸುವ್ಯವಸ್ಥೆಯ ರಕ್ಷಣೆ ಮುಖ್ಯ. ಯಾವುದೇ ಕಾರಣಕ್ಕೂ ದೆಹಲಿ ಸಹಜ ಸ್ಥಿತಿಗೆ ಮರಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಕಠಿಣ ಸಂದೇಶ ರವಾನಿಸಿದ್ದರು. ಅಲ್ಲದೆ ಪೊಲೀಸರ ನೆರವಿಗೆ ಅಗತ್ಯಬಿದ್ದರೆ ಪ್ಯಾರಾಮಿಲಿಟರಿ ಪಡೆಗಳನ್ನೂ ಕೂಡ ಕರೆಸುವುದಾಗಿ ಭರವಸೆ ನೀಡಿದ್ದರು.

ಸಚಿವ ಸಂಪುಟ ಸಭೆಯಲ್ಲಿ ಭಾಗಿ
ಇದೇ ವೇಳೆ ಪ್ರಸ್ತುತ ಹಿಂಸಾಚಾರ ಪೀಡಿತ ಈಶಾನ್ಯ ದೆಹಲಿಯ ಪ್ರದೇಶಗಳಿಗೆ ತೆರಳಿ ಮಾಹಿತಿ ಕಲೆಹಾಕಿರುವ ಧೋವಲ್ ಇಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಪಾಲ್ಗೊಂಡು ಸಭೆಗೆ ಮಾಹಿತಿ ನೀಡಲಿದ್ದಾರೆ. 

ಇನ್ನು ಭಾನುವಾರದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಈ ವರೆಗೂ ಕನಿಷ್ಠ 22 ಮಂದಿ ಬಲಿಯಾಗಿದ್ದು, 190ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ನೂರಾರು ಕೋಟಿ ರೂ ಮೌಲ್ಯದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ವಾಹನಗಳು, ಮನೆ, ಅಂಗಡಿಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. 

SCROLL FOR NEXT