ದೇಶ

ದೆಹಲಿ ಹಿಂಸಾಚಾರ: ಪೊಲೀಸರ ತರಾಟೆಗೆ ತೆಗೆದುಕೊಂಡಿದ್ದ ಜಸ್ಟಿಸ್ ಎಸ್.ಮುರಳೀಧರ್ ವರ್ಗಾವಣೆ

Manjula VN

ನವದೆಹಲಿ: ದೆಹಲಿ ಹಿಂಸಾಚಾರ ಪ್ರಕರಣಗಳನ್ನು ವಿಚಾರಣೆ ನಡೆಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಎಸ್.ಮುರಳೀಧರ್ ಅವರನ್ನು ಬುಧವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್'ಗೆ ವರ್ಗಾವಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. 

ಈಶಾನ್ಯ ದೆಹಲಿಯಲ್ಲಿ ಗಲಭೆಗಳು ಸಂಭವಿಸುವ ಹಲವು ದಿನಗಳ ಮೊದಲು ಸುಪ್ರೀಂಕೋರ್ಟ್ ಕೊಲಿಜಿಯಂ ಇದನ್ನು ಶಿಫಾರಸು ಮಾಡಿದ್ದರಿಂದ ಇದು ವಾಡಿಕೆಯ ವರ್ಗಾವಣೆಯೆಂದು ಹೇಳಲಾಗುತ್ತಿದೆ. 

ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರೊಂದಿಗೆ ಸಮಾಲೋಚಿಸಿದ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ವರ್ಗಾಯಿಸಿದ್ದಾರೆಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಫೆ.12ರಂದು ನಡೆದ ಸಭೆಯಲ್ಲಿ ನ್ಯಾಯಮೂರ್ತಿ ಮುರಳೀಧರ್ ಅವರನ್ನು ದೆಹಲಿ ಹೈಕೋರ್ಟ್ ನಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್'ಗೆ ವರ್ಗಾಯಿಸಲು ಉನ್ನತ ನ್ಯಾಯಾಲಯದ ಕೊಲಿಜಿಯಂ ಶಿಫಾರಸು ಮಾಡಿತ್ತು. ದೆಹಲಿ ಹೈಕೋರ್ಟಿನ ಮೂರನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ಹಾಗೂ ದಿಟ್ಟ ತೀರ್ಪುಗಳನ್ನು ನೀಡುವವರೆದು ಮುರಳೀಧರ್ ಅವರು ಖ್ಯಾತರಾಗಿದ್ದಾರೆ. 

ಇನ್ನು ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ನ್ಯಾಯಾಧೀಶರ ವರ್ಗಾವಣೆ ಪ್ರಸ್ತಾಪವನ್ನು ಈ ಹಿಂದೆಯೇ ಖಂಡಿಸಿತ್ತು. ಇದೀಗ ಸುಪ್ರೀಂಕೋರ್ಟ್ ಕೊಲಿಜಿಯಂ ನಿಂದ ಅತ್ಯುತ್ತಮ ನ್ಯಾಯಾಧೀಶರೊಬ್ಬರು ವರ್ಗಾವಣೆಗೊಂಡಿದ್ದಾರೆಂದು ಬಾರ್ ಅಸೋಸಿಯೇಷನ್ ಬೇಸರ ವ್ಯಕ್ತಪಡಿಸಿದೆ.

SCROLL FOR NEXT