ದೇಶ

ದೆಹಲಿ ಹಿಂಸಾಚಾರ: ಇಂದು 10 ಗಂಟೆಗಳ ಕಾಲ ನಿಷೇಧಾಜ್ಞೆ ಸಡಿಲಿಕೆ

Sumana Upadhyaya

ನವದೆಹಲಿ:ಕಳೆದ 36 ಗಂಟೆಗಳಲ್ಲಿ ಈಶಾನ್ಯ ದೆಹಲಿಯಲ್ಲಿ ಯಾವುದೇ ಅಹಿತಕರ ಘಟನೆ ಕಂಡುಬರದ ಹಿನ್ನೆಲೆಯಲ್ಲಿ ಸೆಕ್ಷನ್ 144ರಡಿಯಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಶುಕ್ರವಾರ 10 ಗಂಟೆಗಳ ಕಾಲ ಸಡಿಲಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.


ದೆಹಲಿ ಹಿಂಸಾಚಾರ ಮತ್ತು ಅಪಾರ ಸಾವು-ನೋವಿನ ಕುರಿತು ತನಿಖೆ ಪ್ರಗತಿಯಲ್ಲಿದ್ದು ಈ ಸಂಬಂಧ ಸುಮಾರು 514 ಶಂಕಿತರಲ್ಲಿ ಕೆಲವರನ್ನು ಬಂಧಿಸಲಾಗಿದ್ದು ಇನ್ನು ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.


ಈಶಾನ್ಯ ದೆಹಲಿಯಲ್ಲಿನ ಹಿಂಸಾಚಾರ ಕುರಿತು ನಾಗರಿಕರು, ಮಾಧ್ಯಮ ಪ್ರತಿನಿಧಿಗಳು ಮುಂದೆ ಬಂದು ಹೇಳಿಕೆಗಳನ್ನು, ಫೋಟೋಗಳನ್ನು, ವಿಡಿಯೊಗಳನ್ನು ಹಂಚಿಕೊಳ್ಳುವಂತೆ ನಿನ್ನೆ ದೆಹಲಿ ಪೊಲೀಸರು ಮನವಿ ಮಾಡಿಕೊಂಡಿದ್ದರು. 

ಈಶಾನ್ಯ ದೆಹಲಿಯಲ್ಲಿ ಮೊನ್ನೆ ಫೆಬ್ರವರಿ 23ರಂದು ಸಿಎಎ ವಿರುದ್ಧ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಎರಡು ಗುಂಪುಗಳ ಮಧ್ಯೆ ತೀವ್ರ ಗಲಭೆ, ಕಲ್ಲುತೂರಾಟ ನಡೆದು ರಕ್ತಪಾತವಾಗಿ ಇದುವರೆಗೆ 38 ಜನ ಮೃತಪಟ್ಟಿದ್ದಾರೆ. ಅವರಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ್ ಶರ್ಮ ಕೂಡ ಸೇರಿದ್ದಾರೆ.ಸುಮಾರು 200 ಮಂದಿಗೆ ಗಂಭೀರ ಗಾಯಗಳಾಗಿವೆ.


ದೆಹಲಿ ಪೊಲೀಸ್ ಇಲಾಖೆಯ ಅಪರಾಧ ವಿಭಾಗದಡಿ ಎರಡು ವಿಶೇಷ ತನಿಖಾ ತಂಡವನ್ನು ತನಿಖೆಗೆ ನೇಮಿಸಲಾಗಿದೆ. ಈ ಘಟನೆಯನ್ನು ಯಾರಾದರೂ ಸ್ವತಃ ಕಂಡಿದ್ದರೆ, ಮೊಬೈಲ್ ನಲ್ಲಿ ಘಟನೆಯ ವಿಡಿಯೊ, ಫೋಟೋ ಹಿಡಿದಿದ್ದರೆ ಅಂತವರು ಮುಂದೆ ಬಂದು ಪೊಲೀಸರಿಗೆ ಹೇಳಿಕೆಗಳನ್ನು, ವಿಡಿಯೊ, ಫೋಟೋಗಳನ್ನು ಈಶಾನ್ಯ ದೆಹಲಿಯ ಡಿಸಿಪಿ ಕಚೇರಿಗೆ, ಸೀಲಂಪುರ್, ದೆಹಲಿ ಪೊಲೀಸ್ ಠಾಣೆಗಳಿಗೆ ಇನ್ನು ಏಳು ದಿನಗಳೊಳಗೆ ಕಚೇರಿ ಅವಧಿಯಲ್ಲಿ ನೀಡಬಹುದು ಎಂದು ಅಪರಾಧ ವಿಭಾಗದ ಹೆಚ್ಚುವರಿ ಅಧಿಕಾರಿ ಬಿ ಕೆ ಸಿಂಗ್ ತಿಳಿಸಿದ್ದಾರೆ.

SCROLL FOR NEXT