ದೇಶ

ದೆಹಲಿ ಹಿಂಸಾಚಾರ: ವಾಜಪೇಯಿ ಮಾತನ್ನೇ ಕೇಳದವರು ನಮ್ಮ ಮಾತು ಕೇಳುತ್ತಾರಾ?: ಬಿಜೆಪಿಗೆ ಕಪಿಲ್ ಸಿಬಲ್ ತಿರುಗೇಟು

Srinivasamurthy VN

ನವದೆಹಲಿ: ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧದ ಕಾಂಗ್ರೆಸ್ ವಾಗ್ದಾಳಿ ಮುಂದುವರೆದಿದ್ದು, ವಾಜಪೇಯಿ ಮಾತನ್ನೇ ಕೇಳದವರು ನಮ್ಮ ಮಾತು ಕೇಳುತ್ತಾರಾ? ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ.

ಗುಜರಾತ್ ಕೋಮು ಗಲಭೆಯ ವೇಳೆ 'ರಾಜಧರ್ಮ' ಪಾಲಿಸುವಂತೆ ಅಟಲ್ ಬಿಹಾರಿ ವಾಜಪೇಯಿ ನೀಡಿದ್ದ ಸಲಹೆಯನ್ನೇ ಕೇಳದವರು ಈಗ ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ನಮ್ಮ ಮಾತನ್ನು ಕೇಳುತ್ತೀರಾ? ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. 

ಇತ್ತೀಚೆಗಷ್ಟೇ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರನ್ನು ಭೇಟಿಯಾಗಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ, ಗೃಹ ಸಚಿವ ಅಮಿತ್ ಶಾರಿಂದ ರಾಜೀನಾಮೆ ಪಡೆಯಬೇಕು ಹಾಗೂ ರಾಜಧರ್ಮ ಪಾಲಿಸುವಂತೆ ಮೋದಿ ಸರ್ಕಾರಕ್ಕೆ ತಾವು ಸೂಚನೆ ನೀಡಬೇಕೆಂದು ಮನವಿ ಮಾಡಿತ್ತು.

ಈ ಕುರಿತಂತೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದ ಕೇಂದ್ರ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ, 'ಕಾಂಗ್ರೆಸ್‌ನವರು ನಮಗೆ ರಾಜಧರ್ಮವನ್ನು ಕಲಿಸಲು ಪ್ರಯತ್ನಿಸುತ್ತಿದ್ದಾರೆ. ಅದರ ಅಗತ್ಯ ನಮಗಿಲ್ಲ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ತಮ್ಮ ಪ್ರಚೋದನಕಾರಿ ಹೇಳಿಕೆ ಮೂಲಕ ದೆಹಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು, 'ಕಾಂಗ್ರೆಸ್‌ ಗೆ ಕಾನೂನು ಸಚಿವರು ಹೇಳುತ್ತಾರೆ: "ದಯವಿಟ್ಟು ನಮಗೆ ರಾಜಧರ್ಮ ಕಲಿಸಬೇಡಿ’’ ಎಂದು. ಸಚಿವರಿಗೆ ರಾಜಧರ್ಮ ಕಲಿಸಲು ನಾವ್ಯಾರು? ಗುಜರಾತ್‌ನಲ್ಲಿ ರಾಜಧರ್ಮ ಪಾಲಿಸಿ ಎಂದು ವಾಜಪೇಯಿ ಹೇಳಿದ ಮಾತನ್ನೇ ಕೇಳದವರು ನಮ್ಮ ಮಾತನ್ನು ಕೇಳುತ್ತಾರೆಯೇ?. ಆಲಿಸುವುದು, ಕಲಿಯುವುದು ಹಾಗೂ ರಾಜಧರ್ಮಕ್ಕೆ ಗೌರವ ನೀಡುವುದು ನಿಮ್ಮ ಸರ್ಕಾರದ ಬಲವಾದ ಅಂಶಗಳಲ್ಲೇ ಇಲ್ಲ ಎಂದು ಹೇಳಿದ್ದಾರೆ.

ಅಲ್ಲದೆ 2002ರಲ್ಲಿ ಗುಜರಾತ್‌ನಲ್ಲಿ ಕೋಮುಗಲಭೆ ನಡೆದ ಸಂದರ್ಭದಲ್ಲಿ ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜಧರ್ಮ ಪಾಲಿಸುವಂತೆ ಹೇಳಿದ್ದನ್ನು ಕಾಂಗ್ರೆಸ್‌ನ ಹಿರಿಯ ನಾಯಕ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

SCROLL FOR NEXT